ಹುಬ್ಬಳ್ಳಿ:ರಾಜ್ಯದ ಜನಕ್ಕೆ ಅಕ್ಕಿ ಕೊಡುತ್ತೇವೆ ಅಂತಾ ಹೇಳಿದ್ದು ನಮ್ಮ ಪ್ರಣಾಳಿಕೆಯಲ್ಲಿ. ಹಾಗಾಗಿ ನಾವು ಬಿಜೆಪಿಯವರನ್ನು ಕೇಳಿ ಪ್ರಣಾಳಿಕೆಯಲ್ಲಿ ಸೇರಿಸಬೇಕಾದ ಅವಶ್ಯಕತೆ ಇರಲಿಲ್ಲ. ಮುಂಬರುವ ದಿನಗಳಲ್ಲಿ ಪ್ರಾಮಾಣಿಕವಾಗಿ ಜನರಿಗೆ 10ಕೆಜಿ ಅಕ್ಕಿ ವಿತರಣೆ ಮಾಡುತ್ತೇವೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಭರವಸೆ ನೀಡಿದ್ದಾರೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿ, ಈ ವಿಷಯ ತಿಳಿಸಿದರು.
ಫುಡ್ ಕಾರ್ಪೋರೇಶನ್ ಅವರು 7 ಲಕ್ಷ ಟನ್ ಅಕ್ಕಿ ಸಂಗ್ರಹ ಇದೆ ಎಂದು ಬರೆದುಕೊಟ್ಟಿದ್ದರು. ಈಗ ಹಿಂಪಡೆದಿದ್ದಾರೆ. ಹಾಗಾಗಿ ನಾವು ಎಕ್ಸ್ಪೋಸ್ ಮಾಡಿದ್ದೇವೆ. ಐದು ಕೆಜಿ ಅಕ್ಕಿ ಕೊಡುವ ಪದ್ಧತಿ ಜಾರಿಗೆ ತಂದಿದ್ದು ಕೇಂದ್ರದ ಯುಪಿಎ ಸರ್ಕಾರ. ಆಹಾರ ಭದ್ರತಾ ಕಾಯ್ದೆ ತಂದಿದ್ದು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ. ಈಗ ಕೊಡುತ್ತಿರುವ 10 ಕೆಜಿ ಅಕ್ಕಿಯ ಹಕ್ಕು ಇರೋದು ಕಾಂಗ್ರೆಸ್ಗೆ, ಬಿಜೆಪಿಗಲ್ಲ ಎಂದು ವಾಗ್ದಾಳಿ ನಡೆಸಿದರು.
ವಿದ್ಯುತ್ ದರ ಏರಿಕೆಗೆ ನಮ್ಮ ಸರ್ಕಾರ ಅಪ್ರೂವಲ್ ಕೊಟ್ಟಿಲ್ಲ. ಹಾಗೇನಾದರೂ ಇದ್ದರೆ ಬಿಜೆಪಿಯವರು ದಾಖಲೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು. ಬಿಜೆಪಿಯಲ್ಲಿ ಅಶಿಸ್ತು ಮೂಡಿದೆ ಎಂಬ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ನ 14 ಜನರನ್ನ ದುಡ್ಡು ಕೊಟ್ಟು ಕೊಂಡುಕೊಂಡು ಸರ್ಕಾರ ರಚನೆ ಮಾಡಿದವರು ಬಿಜೆಪಿಯವರೇ, ಇದ್ಯಾವ ಶಿಸ್ತಿನ ಪಕ್ಷ. ಮಧ್ಯಪ್ರದೇಶ, ಗೋವಾದಲ್ಲಿ ನಮ್ಮ ಸರ್ಕಾರ ಬೀಳಿಸಿ ಅವರು ಸರ್ಕಾರ ರಚನೆ ಮಾಡಿದ್ರು. ಅವರದ್ದು ಶಿಸ್ತಿನ ಪಕ್ಷವಾಗಿದ್ದರೇ ಕಾಂಗ್ರೆಸ್ನವರನ್ನ ಯಾಕೆ ಸೇರಿಸಿಕೊಳ್ಳಬೇಕಿತ್ತು ಎಂದು ಸಚಿವ ಲಾಡ್ ಪ್ರಶ್ನಿಸಿದರು.
ಅವರೇನು ಇವರ ಬಳಿ ಅರ್ಜಿ ಹಾಕಿದ್ದರಾ, ಅವರೇ ಕಾಂಗ್ರೆಸ್ ನಾಯಕರನ್ನ ಕರೆದುಕೊಂಡು ಮುಂಬೈಗೆ ಹೋಗಿ ಇಟ್ಟಿದ್ದು. ಕಾಂಗ್ರೆಸ್ನಲ್ಲಿದ್ದಾಗ ಅವರೆಲ್ಲರೂ ಚೆನ್ನಾಗಿಯೇ ಇದ್ದರು, ಬಿಜೆಪಿಗೆ ಹೋಗಿಯೇ ಅವರು ಕೆಟ್ಟು ಹೋಗಿದ್ದಾರೆ. ನಾವು ಯಾರಿಗೂ ಮೋಸ ಮಾಡಿಲ್ಲ, ಬದಲಾಗಿ ಬಿಜೆಪಿ ಹಾಗೂ ಮೋದಿ ಜನತೆಗೆ ಮೋಸ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ದೇಶದ ಯುವಕರಿಗೆ 2 ಕೋಟಿ ಉದ್ಯೋಗ ಕೊಡುವುದಾಗಿ ಹೇಳಿ ಮೋಸ ಮಾಡಿದ್ದಾರೆ ಎಂದು ಹರಿಹಾಯ್ದರು.