ಹುಬ್ಬಳ್ಳಿ:ಕಾಂಗ್ರೆಸ್ ಪಕ್ಷ ನನಗೆ ಟಿಕೆಟ್ ಕೊಟ್ಟಿದೆ. ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತನಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟ ಪಕ್ಷದ ಎಲ್ಲಾ ಹಿರಿಯರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಮಾಜಿ ಸಚಿವ ಸಂತೋಷ್ ಲಾಡ್ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಹಿರಿಯರ ಹಾಗೂ ಪಕ್ಷದ ಮುಖಂಡರು ನನಗೆ ಟಿಕೆಟ್ ನೀಡಿದ್ದಾರೆ. ಈಗಾಗಲೇ ಸಚಿವನಾಗಿ, ಶಾಸಕನಾಗಿ ಸೇವೆಯನ್ನು ಸಲ್ಲಿಸಿದ್ದೇನೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸೇವೆಯನ್ನು ಸಲ್ಲಿಸುತ್ತೇನೆ ಎಂದರು.
ನಂತರ ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ್ ಛಬ್ಬಿ ಬಂಡಾಯ ವಿಚಾರದ ಬಗ್ಗೆ ಮಾತನಾಡಿದ ಅವರು, ಛಬ್ಬಿ ನನ್ನ ಆತ್ಮೀಯ ಸ್ನೇಹಿತ, ಅವರಿಗೆ ಟಿಕೆಟ್ ಸಿಗದೆ ಇರೋದಕ್ಕೆ ನನಗೂ ಬೇಸರ ಇದೆ. ಪಕ್ಷಾಂತರ ಮಾಡುವ ಹಂತಕ್ಕೆ ಬರಬಾರದಾಗಿತ್ತು. ಪಕ್ಷದ ಮುಖಂಡರು ಕರೆಸಿ ಮಾತನಾಡುತ್ತಾರೆನ್ನುವ ವಿಶ್ವಾಸ ಇದೆ. ನಾನು ಸಹ ವೈಯಕ್ತಿವಾಗಿ ಮಾತನಾಡಿ ಮನವೊಲಿಕೆಗೆ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ನಾಗರಾಜ್ ಛಬ್ಬಿ ಸ್ಪರ್ಧೆ ನಿಮ್ಮ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರ ಸ್ಪರ್ಧೆಯಿಂದ ನನ್ನ ಫಲಿತಾಂಶದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಹೇಳಲಿಕ್ಕೆ ಬರುವುದಿಲ್ಲ. ಇಲ್ಲಿ ಮತದಾರರ ನಿರ್ಧಾರವೇ ಅಂತಿಮ. ಜನ ನನ್ನನ್ನು ಗೆಲ್ಲಿಸುತ್ತಾರೆಂಬ ನಂಬಿಕೆ ಇದೆ ಎಂದರು. ಇನ್ನು ಕಾಂಗ್ರೆಸ್ ಗೆದ್ದರೆ ಯಾರು ಸಿಎಂ ಆಗ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿ, ನಮಗೆ ಸ್ಪಷ್ಟ ಬಹುಮತ ಬರುತ್ತದೆ ಎನ್ನುವ ನಂಬಿಕೆ ಇದೆ. ಫಲಿತಾಂಶ ಬಂದ ಮೇಲೆ ಸಿಎಂ ಯಾರಾಗಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಹೇಳಿದರು.
ಸಿದ್ದರಾಮಯ್ಯ ಮತ್ತು ಡಿಕೆಶಿ ಚುನಾವಣೆಗೆ ಸ್ಪರ್ಧೆ ಮಾಡೋದು ಬೇಡ, ಅವರು ಪಕ್ಷ ಸಂಘಟನೆ ಮಾಡಲಿ ಎಂದು ಹಿಂದೆ ಹೇಳಿಕೆ ಕೊಟ್ಟಿದ್ದ ಬಗ್ಗೆ ಪ್ರತಿಕ್ರಿಯಿಸಿ, ಅವರಿಬ್ಬರೂ ರಾಜ್ಯಾದ್ಯಂತ ಪ್ರವಾಸ ಮಾಡಿದ್ದರೆ ಕಾಂಗ್ರೆಸ್ ಅತಿ ಹೆಚ್ಚು ಸೀಟುಗಳನ್ನ ಗೆಲ್ಲುತ್ತದೆ ಎಂಬ ಉದ್ದೇಶದಿಂದ ಹೇಳಿದ್ದೆ. ಬೇರೆ ಯಾವುದೇ ಉದ್ದೇಶ ಇಲ್ಲ ಎಂದು ಲಾಡ್ ಸ್ಪಷ್ಟಪಡಿಸಿದರು. ಟಿಕೆಟ್ ಸಿಕ್ಕಿರುವ ಬಗ್ಗೆ ಮಾತನಾಡಿ, ಟಿಕೆಟ್ ಆಯ್ಕೆಯಲ್ಲಿ ಯಾರ ಕೈ ಮೇಲಾಯಿತು, ಕೆಳಗಾಯಿತು ಎಂಬ ಪ್ರಶ್ನೆ ಬರುವುದಿಲ್ಲ. ಹೈಕಮಾಂಡ್ ಗುರುತಿಸಿ ನನಗೆ ಟಿಕೆಟ್ ನೀಡಿದೆ ಎಂದರು.
ಬಿಜೆಪಿ ಕಾರ್ಯಕ್ರಮಗಳಿಗೆ ಜನ ಸೇರುತ್ತಿಲ್ಲ, ಹಾಗಾಗಿ ಸಿನಿಮಾ ನಟರನ್ನು ಕರೆಸುತ್ತಿದ್ದಾರೆ- ಲಾಡ್.. ಬಿಜೆಪಿ ಪಟ್ಟಿ ಬಿಡುಗಡೆ ಆಗದಿರುವುದಕ್ಕೆ ಆಂತರಿಕ ಕಚ್ಚಾಟವೇ ಕಾರಣ. ಇಷ್ಟು ದಿನ ಪ್ರಧಾನಿ ನರೇಂದ್ರ ಮೋದಿಯನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡಿದ್ದರು. ಈಗ ಸಿನಿಮಾ ನಟರನ್ನು ಸ್ಟಾರ್ ಪ್ರಚಾರಕರನ್ನಾಗಿ ಕರೆಯುತ್ತಿದ್ದಾರೆ. ಸಿನಿಮಾ ನಟರನ್ನು ಕರೆಯಬಾರದಂತೇನಿಲ್ಲ, ಆದರೆ ಬಿಜೆಪಿಯವರಿಗೆ ಮೋದಿ ಮುಖ ಬಿಟ್ಟರೆ, ಸಿನಿಮಾ ನಟರ ಮೂಲಕ ಜನರನ್ನು ಆಕರ್ಷಿಸಿ ಕರೆಸಬೇಕಾಗಿದೆ. ಅವರ ಯಾವುದೇ ರಾಜಕೀಯ ಕಾರ್ಯಕ್ರಮದಲ್ಲಿ ಜನರು ಸೇರುತ್ತಿಲ್ಲ. ಹೀಗಾಗಿ ಹೊಸ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಂತೋಷ್ ಲಾಡ್ ವ್ಯಂಗ್ಯವಾಡಿದರು.
ಈ ಬಾರಿ ಜನ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ -ಸಂತೋಷ್ ಲಾಡ್:ನಾನು 10 ವರ್ಷ ಮಾಡಿದ ಕೆಲಸ, ನಮ್ಮ ಸರ್ಕಾರ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಮಾಡಿದ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳಿಸಿ ಮತ ಯಾಚಿಸುತ್ತೇನೆ. ನರೇಂದ್ರ ಮೋದಿಯವರ ಎಂಟು ವರ್ಷದ ಆಡಳಿತ ಮತ್ತು ರಾಜ್ಯದಲ್ಲಿ ಬಿಜೆಪಿಯ ನಾಲ್ಕು ವರ್ಷದ ಆಡಳಿತದ ಬಗ್ಗೆ ಜನರಿಗೆ ತಿಳಿದಿದೆ ಈ ಬಾರಿ ಜನ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು. ಈ ವೇಳೆ ಟಿಕೆಟ್ ಪಡೆದು ನಗರಕ್ಕೆ ಆಗಮಿಸಿದ ಸಂತೋಷ್ ಲಾಡ್ ಅವರನ್ನು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು.
ಇದನ್ನೂ ಓದಿ:ಕೊರಟಗೆರೆಯಲ್ಲಿ ಮಾತ್ರ ಸ್ಪರ್ಧೆ, ಎರಡು ಕಡೆ ನಿಲ್ಲುವ ಅವಶ್ಯಕತೆ ನನಗಿಲ್ಲ: ಡಾ ಜಿ ಪರಮೇಶ್ವರ್