ಹುಬ್ಬಳ್ಳಿ/ಧಾರವಾಡ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿದ್ದಾರೆ. "ಇದು ಅವರವರ ಪಕ್ಷದ ವಿಚಾರ, ರಾಜಕೀಯ ಪಕ್ಷಗಳು ಆಗಾಗ ಮೈತ್ರಿ ಮಾಡಿಕೊಳ್ಳುತ್ತವೆ. ಅದು ಆಯಾ ಪಕ್ಷಗಳ ನಿಲುವು" ಎಂದಿದ್ದಾರೆ.
ಈ ಕುರಿತು ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಸಲ ನಾವು ಕೂಡ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೆವು. ಅದು ಅವರವರ ಇಚ್ಛಾಶಕ್ತಿ, ಅವರ ಪಕ್ಷಗಳ ವಿಚಾರ. ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ತೆಗೆದುಕೊಳ್ಳಲಿ, ಬಿಜೆಪಿಗೆ ಸೋಲಿನ ಭಯ ಇರಬಹುದು ಎಂದು ಟೀಕಿಸಿದರು.
"ಭಾರತ ದೇಶ ಜೋಡಿಸುತ್ತೇನೆ ಅಂತ ರಾಹುಲ್ ಗಾಂಧಿ ಹೊರಟಿದ್ದು, ಅವರ ಪ್ರಖ್ಯಾತಿ ಹೆಚ್ಚುತ್ತಿದೆ. ಬಿಜೆಪಿಯವರು ಬೆಂಕಿ ಹಚ್ಚಿ ದೇಶ ಒಡೆಯುತ್ತಿದ್ದಾರೆ. ಅದನ್ನು ಜೋಡಿಸುವ ಕೆಲಸವನ್ನು ನಾ ಮಾಡುವೆ ಎಂದು ರಾಹುಲ್ ಗಾಂಧಿ ಮುಂದಾಗಿದ್ದಾರೆ. ಉದ್ಯಮಿ ಅದಾನಿ ವಿರುದ್ಧ ರಾಗಾ ಮಾತನಾಡಲು ಶುರು ಮಾಡಿದ್ದೇ ಅನರ್ಹತೆಗೆ ಕಾರಣವಾಗಿದೆ. ಅದಾನಿಗೂ ಮೋದಿಗೂ ಏನು ಸಂಬಂಧ ಅಂತಾ ಕೇಳುವುದಕ್ಕೆ ಶುರು ಮಾಡಿದ್ದರು. ಆಗ ಲೋಪದೋಷ ಹುಡುಕಿ ಅಸಂವಿಧಾನಿಕ ಪದ ತೆಗೆದರು. ಹೀಗಾಗಿ, ಸದಸ್ಯತ್ವ ಅನರ್ಹ ಮಾಡಿದ್ದಾರೆ. ಇದನ್ನೆಲ್ಲಾ ಇಡೀ ಭಾರತ ದೇಶ ನೋಡುತ್ತಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆ ವಿಚಾರದ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವರು, " ರಾಜ್ಯದಲ್ಲಿ ಬರಗಾಲ ಘೋಷಿಸಬೇಕೆಂಬ ಬೇಡಿಕೆ ಇದೆ, ಇದನ್ನು ಸರ್ಕಾರ ತೀರ್ಮಾನ ಮಾಡುತ್ತದೆ. ಸರ್ವೆ ವರದಿ, ಮಳೆ ಅಂಕಿ ಸಂಖ್ಯೆ ನೋಡಿ ತೀರ್ಮಾನ ಮಾಡಲಾಗುತ್ತದೆ. ಈಗಾಗಲೇ ಸರ್ಕಾರ, ಸಂಬಂಧಿಸಿದ ಸಚಿವರು ಮಾಹಿತಿ ಪಡೆದಿದ್ದಾರೆ. ಸಂಬಂಧಿತ ಇಲಾಖೆಯ ಸಚಿವರೇ ತೀರ್ಮಾನ ಹೇಳುತ್ತಾರೆ. ಧಾರವಾಡ ಜಿಲ್ಲೆಯಲ್ಲಿಯೂ ಮಳೆ ಕಡಿಮೆ ಆಗುತ್ತಿದೆ. ಶೇ. 55ರಷ್ಟು ಮಳೆ ಕೊರತೆ ಇದೆ. ಹೀಗಾಗಿ, ಬರಗಾಲ ಘೋಷಣೆ ನಿರೀಕ್ಷೆ ಮಾಡುತ್ತಿದ್ದೇವೆ ಎಂದರು.