ಹುಬ್ಬಳ್ಳಿ: ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸಾರಿಗೆ ಸಂಸ್ಥೆಯ ಬಸ್‌ಗಳು ಹಾಗೂ ಕಚೇರಿ, ಬಸ್ ನಿಲ್ದಾಣಗಳಲ್ಲಿ ಸೋಡಿಯಂ ಹೈಪೋಕ್ಲೋರೈಡ್ ದ್ರಾಣದಿಂದ ಸ್ಯಾನಿಟೈಸ್ ಮಾಡಲಾಗುತ್ತಿದೆ.
ಕೋವಿಡ್ ಎರಡನೆ ಅಲೆ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ನಿರ್ದೇಶನಗಳ ಪ್ರಕಾರ ಸಾರಿಗೆ ಸಂಸ್ಥೆಯಲ್ಲಿ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಈ ಹಿನ್ನೆಲೆ ಬಸ್‌ಗಳನ್ನು ನಿತ್ಯ ಸ್ಯಾನಿಟೈಸನ್ ಮಾಡಲಾಗುತ್ತಿದೆ. ಬಸ್ ಮತ್ತು ಬಸ್ ನಿಲ್ದಾಣಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಬಸ್‌ಗಳಲ್ಲಿ ಶೇ.50ರಷ್ಟು ಆಸನಗಳಲ್ಲಿ ಮಾತ್ರ ಪ್ರಯಾಣಿಸಲು ಅನುಮತಿಸಲಾಗಿದೆ.
ಈ ವೇಳೆ ಮಾತನಾಡಿರುವ ವಾಕರಸಾ ಸಂಸ್ಥೆ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ, ಕೋವಿಡ್ ನಿಯಮಾವಳಿಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಲು ಸಾರ್ವಜನಿಕರು ಸಂಸ್ಥೆಯೊಂದಿಗೆ ಸಹಕರಿಸಬೇಕು ಎಂದಿದ್ದಾರೆ.
ಮಹಾರಾಷ್ಟ್ರ ರಾಜ್ಯಕ್ಕೆ ಬಸ್ ಸಂಚಾರ ಸ್ಥಗಿತ :ಮಹಾರಾಷ್ಟ್ರ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಅತಿ ಹೆಚ್ಚಾಗುತ್ತಿರುವ ಹಿನ್ನೆಲೆ ಹುಬ್ಬಳ್ಳಿಯಿಂದ ಮಹಾರಾಷ್ಟ್ರ ರಾಜ್ಯಕ್ಕೆ ಸಂಚರಿಸುವ ಎಲ್ಲಾ ಮಾದರಿಯ ಬಸ್‌ಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.
ಕೋವಿಡ್ ಪೂರ್ವದಲ್ಲಿ ಗೋವಾ,ಮಹಾರಾಷ್ಟ್ರ,ಆಂಧ್ರಪ್ರದೇಶ, ತೆಲಂಗಾಣ,ತಮಿಳುನಾಡು ಮುಂತಾದ ಅಂತರ ರಾಜ್ಯಗಳಿಗೆ ವೊಲ್ವೊ,ಸ್ಲೀಪರ್,ರಾಜಹಂಸ ಮತ್ತು ವೇಗದೂತ ಸಾರಿಗೆಗಳು ಸೇರಿ 65 ಬಸ್‌ಗಳು ಸಂಚರಿಸುತ್ತಿದ್ದವು. ಅವುಗಳಲ್ಲಿ ಅತೀ ಹೆಚ್ಚು ಅಂದರೆ 38 ಬಸ್‌ಗಳು ಮಹಾರಾಷ್ಟ್ರ ರಾಜ್ಯದ ವಿವಿಧ ಸ್ಥಳಗಳಿಗೆ ಹೋಗಿ ಬರುತ್ತಿದ್ದವು.
ಹುಬ್ಬಳ್ಳಿಯಿಂದ ನಿತ್ಯ 24 ವೇಗದೂತ, 2 ರಾಜಹಂಸ, 8 ಎಸಿ ಸ್ಲೀಪರ್ ಮತ್ತು 4 ಏರಾವತ ವೋಲ್ವೋ ಬಸ್‌ಗಳು ಸಂಚರಿಸುತ್ತಿದ್ದವು. ಈ ಬಸ್‌ಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಪ್ರಯಾಣಿಸುತ್ತಿದ್ದರು. ಸಂಸ್ಥೆಗೆ ಅತ್ಯಧಿಕ ಸಾರಿಗೆ ಆದಾಯ ಬರುತ್ತಿತ್ತು.
ಕೋವಿಡ್ ತೀವ್ರತೆ ಕಾರಣಕ್ಕಾಗಿ ಈಗಾಗಲೇ ಮುಂಬೈಗೆ ಹೋಗುತ್ತಿದ್ದ ಎಸಿ ಸ್ಲೀಪರ್ ಹಾಗೂ ಪಿಂಪ್ರಿ ಮತ್ತು ಶಿರಡಿಗೆ ಹೋಗುತ್ತಿದ್ದ ಐರಾವತ ಬಸ್‌ಗಳನ್ನು ರದ್ದುಗೊಳಿಸಲಾಗಿತ್ತು. ಈಗ ಪಿಂಪ್ರಿಗೆ ಹೋಗುವ ಎರಡು ಸ್ಲೀಪರ್, ಶಿರಡಿಯ ಒಂದು ಸ್ಲೀಪರ್ ಮತ್ತು ಸೊಲ್ಲಾಪುರಕ್ಕೆ ಹೋಗುವ ರಾಜಹಂಸ ಬಸ್ಸುಗಳನ್ನು ರದ್ದುಗೊಳಿಸಲಾಗಿದೆ.