ಹುಬ್ಬಳ್ಳಿ: ಕೆಲದಿನಗಳ ಹಿಂದೆ ಇಮ್ತಿಯಾಜ್ ತನ್ನ ಸ್ನೇಹಿತ ಸಾಗರ್ ಅಂಗಡಿಯನ್ನು ಉಳಿಸೋಕೆ ಪಡಬಾರದ ಕಷ್ಟ ಪಟ್ಟು ಆಸ್ಪತ್ರೆಗೆ ಶಿಫ್ಟ್ ಮಾಡಿಸಿ ಬೇಷ್ ಎನ್ನಿಸಿಕೊಂಡಿದ್ದ. ಆದ್ರೆ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಾಗರ್ ಮರು ದಿನವೇ ಸಾವ್ನಪ್ಪಿದ್ದ. ಅಲ್ಲಿಗೆ ಪೊಲೀಸರು ಕೂಡಾ ಅದೊಂದು ಅಸಹಜ ಸಾವು ಎಂದು ದೂರು ದಾಖಲಿಸಿಕೊಂಡಿದ್ದರು. ಆದ್ರೆ ಆ ಸಿಸಿಟಿವಿ ಹೇಳಿದ ಸತ್ಯ ಸದ್ಯ ಖಾಕಿ ಪಡೆಯನ್ನ ದಿಗ್ಬ್ರಾಂತಗೊಳಿಸಿದೆ.
ಹೌದು, ಇದು ವಿಚಿತ್ರವಾದರೂ ಸತ್ಯ. ಅಂದು ಹುಬ್ಬಳ್ಳಿಯ ಶಾಂತಿನಗರ ಚರ್ಚ್ ಬಳಿ ಸಾಗರ್ ಅಂಗಡಿ ಎಂಬ ಯುವಕ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ. ಅಲ್ಲೇ ಇದ್ದ ಆತನ ಸ್ನೇಹಿತ ತನ್ನ ಗೆಳೆಯನ ಪ್ರಾಣ ಉಳಿಸಿಕೊಳ್ಳಲು ಇನ್ನಿಲ್ಲದ ಹರಸಾಹಸ ಪಡುತ್ತಿದ್ದ. ಸ್ಥಳೀಯರಿಗೆ ತನ್ನ ಗೆಳೆಯ ಕುಡಿದ ಮತ್ತಿನಲ್ಲಿ ಕಂಬಕ್ಕೆ ಡಿಕ್ಕಿ ಹೊಡೆದು ಗಾಯ ಮಾಡಿಕೊಂಡಿದ್ದಾನೆ ಕಾಪಾಡಿ ಎಂದು ಸಹಾಯ ಕೇಳಿ ಸ್ನೇಹಿತನನ್ನ ಆಸ್ಪತ್ರೆಗೆ ಶಿಫ್ಟ್ ಮಾಡಿಸಿದ್ದ. ಆದ್ರೆ ಮರುದಿವೇ ಸಾಗರ್ ಚಿಕಿತ್ಸೆ ಫಲಕಾರಿಯಾಗದೇ ಕಿಮ್ಸ್ ನಲ್ಲಿ ಸಾವನ್ನಪ್ಪಿದ್ದ ನಂತರ ಸ್ನೇಹಿತನ ಬೆನ್ನಿಗೆ ಚೂರಿ ಹಾಕಿದ್ದ ಇಮ್ತಿಯಾಜ್ನ ಬಣ್ಣ ಬಯಲಾಗಿದೆ.
ಕೂಡಲೆ ಕಿಮ್ಸ್ ಆಸ್ಪತ್ರೆಗೆ ಬಂದ ಕೇಶ್ವಾಪುರ ಪೊಲೀಸರು ಅದೊಂದು ಅಸಹಜ ಸಾವು ಎಂದು ದೂರು ದಾಖಲಿಸಿಕೊಂಡು ಸುಮ್ಮನಾಗುತ್ತಾರೆ. ಆದ್ರೆ ಠಾಣಾಧಿಕಾರಿಗೆ ಮಾತ್ರ ಈ ಬಗ್ಗೆ ಸಂಶಯ ಕಾಡುತ್ತಲೆ ಇತ್ತು. ಕುಡಿದು ಕಂಬಕ್ಕೆ ಡಿಕ್ಕಿ ಹೊಡೆದರೆ ಸಾಗರ್ ಬಟ್ಟೆ ಹರಿದಿದ್ದು ಏಕೆ ಎನ್ನೋ ಅನುಮಾನ ಕಾಡುತ್ತೆ. ಹೀಗಾಗಿ ತಮ್ಮ ಸಿಬ್ಬಂದಿ ಕಳುಹಿಸಿ ಘಟನೆ ನಡೆದ ಸ್ಥಳದ ಅಕ್ಕ ಪಕ್ಕ ಪ್ರದೇಶದ ಸಿಸಿಟಿವಿ ಪುಟೇಜ್ ನೋಡಿದಾಗ ಭಯಾನಕ ಸತ್ಯ ಹೊರಬಂದಿದೆ. ಸಿಸಿಟಿವಿಯಲ್ಲಿ ಇದೇ ಸಾಗರ್ ಹಾಗೂ ಇಮ್ತಿಯಾಜ್ ಹೊಡೆದಾಟ ಮಾಡೋ ದೃಶ್ಯ ಸೆರೆ ಸಿಕ್ಕಿತ್ತು. ತಕ್ಷಣವೇ ಇಮ್ತಿಯಾಜ್ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ ಪೊಲೀಸರಿಗೆ ಕೊಲೆಗಾರ ಬೇರ್ಯಾರು ಅಲ್ಲ ಈತನೇ ಎಂದು ಗೊತ್ತಾಗಿದೆ.
ಪೊಲೀಸರು ಸಿಸಿಟಿವಿ ದೃಶ್ಯ ಇಟ್ಟುಕೊಂಡು ಇಮ್ತಿಯಾಜ್ನನ್ನು ಪ್ರಶ್ನೆ ಮಾಡಿದಾಗ ಇಮ್ತಿಯಾಜ್ ಕೊಲೆ ರಹಸ್ಯ ಬಾಯಿಬಿಟ್ಟಿದ್ದಾನೆ. ಅಕ್ಟೋಬರ್ 20 ರ ಬೆಳಗ್ಗೆ ಇಮ್ತಿಯಾಜ್ ಹಾಗೂ ಸಾಗರ್ ಮಧ್ಯೆ ಅದೇ ಏರಿಯಾದ ಹನುಮಾನ್ ಮಂದಿರದ ಬಳಿ ಜಗಳವಾಗಿದೆ. ಸಾಗರ್ ಇಮ್ತಿಯಾಜ್ ಮೇಲೆ ಹಲ್ಲೆ ಮಾಡಿರುತ್ತಾನೆ. ಇದೇ ಸೇಡು ತಿರಿಸಿಕೊಳ್ಳಲು ಇಮ್ತಿಯಾಜ್ ಸಾಗರನ್ನ ಕರೆಯಿಸಿ ಚೆನ್ನಾಗಿ ಕುಡಿಸಿದ್ದಾನೆ. ಆ ಬಳಿಕ ಜಗಳ ತೆಗೆದಿದ್ದಾನೆ, ಈ ವೇಳೆ ಮಾತಿಗೆ ಮಾತು ಬೆಳೆದು ಕೈ ಮಿಲಾಯಿಸಿರುತ್ತಾರೆ. ಕೊನೆಗೆ ಸಾಗರ್ನನ್ನ ಜೋರಾಗಿ ತಳ್ಳಿದಾಗ ಆತ ಗೋಡೆಗೆ ತಾಗಿ ತಲೆಗೆ ಗಂಭೀರವಾಗಿ ಗಾಯಗೊಳ್ಳುತ್ತಾನೆ. ಅಲ್ಲಿಂದಲೇ ಆತ ತನ್ನ ಸ್ನೇಹಿತನನ್ನ ಉಳಿಸೋ ನಾಟಕ ಶುರು ಮಾಡಿದ್ದಾಗಿ ಬಾಯಿಬಿಟ್ಟಿದ್ದಾನೆ.
ಸದ್ಯ ಕೇಸ್ ದಾಖಲಿಸಿಕೊಂಡಿರೋ ಕೇಶ್ವಾಪುರ ಪೊಲೀಸರು ಆರೋಪಿ ಇಮ್ತಿಯಾಜ್ ನನ್ನ ನ್ಯಾಯಂಗ ಬಂಧನಕ್ಕೊಪ್ಪಿಸಿದ್ದಾರೆ. ಆದ್ರೆ ಅಸಹಜ ಸಾವೆಂದು ಪೊಲೀಸರು ಸುಮ್ಮನಿದ್ದಿದ್ರೆ ಈ ಆರೋಪಿ ಇಮ್ತಿಯಾಜ್ ಬಚಾವ್ ಆಗಿಬಿಡುತ್ತಿದ್ದ. ಸದ್ಯ ಕೇಶ್ವಾಪುರ ಪೊಲೀಸರ ಚಾಕಚಕ್ಯತೆಗೆ ಕೊಲೆಗಾರ ತಗ್ಲಾಕಿಕೊಂಡಿದ್ದಾನೆ. ಅದು ಏನೇ ಇರಲಿ ತಾನು ತಪ್ಪು ಮಾಡಿದ್ರು ನಾಟಕವಾಡಿ ಬಚಾವ್ ಆಗ್ಬೇಕು ಎಂದವನಿಗೆ ಸಿಸಿಟಿವಿ ಜೈಲು ಕಂಬಿ ಎಣಿಸುವಂತೆ ಮಾಡಿದೆ.