ಹುಬ್ಬಳ್ಳಿ: ನಗರದ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಆರ್ಎಸ್ಎಸ್ ಕೊರೊನಾ ಸಹಾಯವಾಣಿ ಕೇಂದ್ರ ಆರಂಭಿಸಿರುವುದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದ್ದು, ಕೂಡಲೇ ಸಹಾಯವಾಣಿ ಕೇಂದ್ರವನ್ನು ಕಿಮ್ಸ್ನಿಂದ ತೆರವುಗೊಳಿಸುವದರ ಜೊತೆಗೆ ಕಿಮ್ಸ್ ನಿರ್ದೇಶಕರ ಮೇಲೆ ಕ್ರಮ ತಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ವಿವಾದಕ್ಕೆ ಕಾರಣವಾದ ಕಿಮ್ಸ್ ಆವರಣದ ಆರ್ಎಸ್ಎಸ್ ಕೊರೊನಾ ಸಹಾಯವಾಣಿ ಕೇಂದ್ರ - RSS Corona Helpline
ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿರುವ ಆರ್ಎಸ್ಎಸ್ ಕೊರೊನಾ ಸಹಾಯವಾಣಿ ಕೇಂದ್ರವನ್ನು ತೆರವುಗೊಳಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಕಾಂಗ್ರೆಸ್ ಮನವಿ ಸಲ್ಲಿಸಿದೆ.
ಆರ್ಎಸ್ಎಸ್ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷದ ಪಿತೃ ಪಕ್ಷವಾಗಿದೆ. ಈ ಸಂಘಟನೆಯ ಸೇವಾ ಭಾರತೀಯ ಟ್ರಸ್ಟಿನ ಮುಖಾಂತರ ಹುಬ್ಬಳ್ಳಿಯ ಪ್ರತಿಷ್ಠಿತ ಆಸ್ಪತ್ರೆಯಾದ ಕಿಮ್ಸ್ ಆಸ್ಪತ್ರೆಯಲ್ಲಿ, ಆರ್ಎಸ್ಎಸ್ ಕೊರೊನಾ ಸಹಾಯವಾಣಿಯನ್ನು ಆರಂಭಿಸಿದ್ದು ಖಂಡನೀಯವಾಗಿದೆ. ಸರ್ಕಾರಿ ಆಸ್ತಿಯಲ್ಲಿ ಒಂದು ಪಕ್ಷಕ್ಕೆ ಸಂಬಂಧಿತ ಸಂಘನೆಯ ಸಹಾಯವಾಣಿ ತೆಗೆದಿರುವುದು ಆಕ್ಷೇಪಾರ್ಹವಾಗಿದೆ. ಈ ಸಹಾಯವಾಣಿ ಉದ್ಘಾಟನೆ ಕಾರ್ಯಕ್ರಮಕ್ಕೆ ಕಿಮ್ಸ್ ನಿರ್ದೇಶಕರಾದ ಡಾ. ರಾಮಲಿಂಗಪ್ಪ ಅಂತರ್ತಾನಿಯವರು ಅತಿಥಿಗಳಾಗಿ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ನಿರ್ದೇಶಕರ ಮೇಲೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಆರ್ಎಸ್ಎಸ್ನವರು ಸರ್ಕಾರಿ ಆಸ್ತಿಯಲ್ಲಿ ಸ್ಥಾಪಿಸಿರುವ ಸಹಾಯವಾಣಿ ಕೇಂದ್ರವನ್ನು ತೆರವುಗೊಳಿಸಲು ಆದೇಶ ನೀಡಬೇಕು ಎಂದು ಮನವಿ ಸಲ್ಲಿಸಿದೆ.
ಕ್ರಮ ಕೈಗೊಳ್ಳದಿದ್ದರೆ ಇದರ ವಿರುದ್ಧ ನಾವು ನ್ಯಾಯಾಂಗ ಹೋರಾಟಕ್ಕೆ ಬದ್ಧರಾಗಿದ್ದೇವೆ ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿದೆ.