ಕರ್ನಾಟಕ

karnataka

ರಸ್ತೆ ಕಾಮಗಾರಿ ಪರಿಶೀಲಿಸಿದ ಜಿಲ್ಲಾಧಿಕಾರಿ; ನ್ಯಾಯಾಲಯ ಸಂಕೀರ್ಣ ಸಂಪರ್ಕ ರಸ್ತೆ ಶೀಘ್ರ ಆರಂಭ

By

Published : Aug 3, 2019, 8:04 PM IST

ಹೊಸೂರ್-ಉಣಕಲ್ ಬೈಪಾಸ್ ರಸ್ತೆಯಲ್ಲಿ ಬರುವ ನೂತನ ನ್ಯಾಯಾಲಯ ಸಂಕೀರ್ಣ ಸಂಪರ್ಕಿಸುವ ರಸ್ತೆ ನಿರ್ಮಾಣ ಕಾಮಗಾರಿಯನ್ನು ಶೀಘ್ರವಾಗಿ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಭರವಸೆ ನೀಡಿದ್ದಾರೆ.

ರಸ್ತೆ ಸ್ಥಳ ಪರಿಶೀಲನೆ

ಹುಬ್ಬಳ್ಳಿ:ಕೇಂದ್ರ ರಸ್ತೆ ನಿಧಿಯಿಂದ ನಿರ್ಮಿಸಲಾಗುತ್ತಿರುವ ಹೊಸೂರ್-ಉಣಕಲ್ ಬೈಪಾಸ್ ರಸ್ತೆಯಲ್ಲಿ ಬರುವ ನೂತನ ನ್ಯಾಯಾಲಯ ಸಂಕೀರ್ಣ ಸಂಪರ್ಕಿಸುವ ರಸ್ತೆ ನಿರ್ಮಾಣ ಕಾಮಗಾರಿಯನ್ನು ಶೀಘ್ರವಾಗಿ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

ಇಂದು ಹುಬ್ಬಳ್ಳಿ ಹೊಸೂರು ವೃತ್ತದಿಂದ ನೂತನ ಕೋರ್ಟ್ ಸಂಕೀರ್ಣ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಹು-ಧಾ ಪಾಲಿಕೆ ಆಯುಕ್ತರು, ರಾಷ್ಟ್ರೀಯ ಹೆದ್ದಾರಿ ಕಾರ್ಯನಿರ್ವಾಹಕ ಅಭಿಯಂತರರು, ಲೋಕೋಪಯೋಗಿ ಇಲಾಖೆ ಅಭಿಯಂತರರು, ಬಿ.ಆರ್.ಟಿ.ಎಸ್. ಹಾಗೂ ಹೆಸ್ಕಾಂ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ರಸ್ತೆ ನಿರ್ಮಾಣ ಕಾಮಗಾರಿ ಈಗಾಗಲೇ ತಡವಾಗಿದೆ. ರಸ್ತೆಯ ಅಗಲೀಕರಣ ಕುರಿತು ಪಾಲಿಕೆ ಅಧಿಕಾರಿಗಳು ಸರ್ವೇ ಕಾರ್ಯವನ್ನು ಪೂರ್ಣಗೊಳಿಸಿದ್ದು, ದಾಖಲೆಗಳ ಅನುಸಾರ ಪಾಲಿಕೆ ಜಾಗವಿದೆ. ಹಾಗಾಗಿ ಕಾಮಗಾರಿ ಕೈಗೊಳ್ಳಲು ಯಾವುದೇ ತೊಂದರೆ ಇಲ್ಲ ಎಂದರು.

ರಸ್ತೆ ನಿರ್ಮಾಣದಿಂದ ನೂತನ ನ್ಯಾಯಾಲಯ ಸಂಕೀರ್ಣ ಹಾಗೂ ಬಿ.ಆರ್.ಟಿ.ಎಸ್ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಿದಂತೆ ಆಗುತ್ತಿದೆ. ರಸ್ತೆ ಕಿರಿದಾಗಿರುವುದರಿಂದ ಕಾಮಗಾರಿ ಕೈಗೊಳ್ಳಲು ಅಡಚಣೆ ಉಂಟಾಗಿತ್ತು. ರಸ್ತೆಯಲ್ಲಿ ಉಂಟಾಗಿರುವ ಒತ್ತುವರಿ ಮನೆಗಳು, ಮರಗಳು ಹಾಗೂ ಹೆಸ್ಕಾಂ ಕಂಬಗಳನ್ನು ಶೀಘ್ರವಾಗಿ ಸ್ಥಳಾಂತರ ಮಾಡಲಾಗುವುದು ಎಂದು ಹೇಳಿದರು.

ಗೋಕುಲ ರಸ್ತೆ ಸಂಪರ್ಕಿಸುವ ವೃತ್ತಂದ ನ್ಯಾಯಾಲಯದ ಕಡೆ 110 ಅಡಿವರೆಗೆ ಮನೆಗಳನ್ನು ನಿರ್ಮಿಸಲಾಗಿದೆ. ಇವರಿಗೆ ಆಶ್ರಯ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಡಲಾಗುವುದು. ಒಟ್ಟು 66 ಮನೆಗಳನ್ನು ಸ್ಥಳಾಂತರಿಸಲಾಗುತ್ತಿದೆ. 14 ಮರಗಳನ್ನು ಕಡಿಯಲು ಅರಣ್ಯ ಇಲಾಖೆಯಿಂದ ಅನುಮತಿ ನೀಡಲಾಗಿದೆ. ನಿಗದಿತ ವೇಳಾಪಟ್ಟಿಯನ್ನು ಸಿದ್ದಪಡಿಸಿ ಕೆಲಸ ನಿರ್ವಹಿಸುವಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಾಲಿಕೆ‌ ಆಯುಕ್ತ ಸುರೇಶ್ ಇಟ್ನಾಳ್, ಸ್ಮಾರ್ಟ್ ಸಿಟಿ ಅಧಿಕಾರಿ ಶಕೀಲ್ ಅಹ್ಮದ್, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ಯಮಕನಮರಡಿ ಸೇರಿದಂತೆ ಇತರೆ ಇಲಾಖೆ‌ ಅಧಿಕಾರಿಗಳು ಉಪಸ್ಥಿತರಿದ್ದರು.

ABOUT THE AUTHOR

...view details