ಹುಬ್ಬಳ್ಳಿ: ಅವಳಿ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಇದರಿಂದಾಗಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ರಸ್ತೆಗಳನ್ನು ಅತಿಕ್ರಮಣ ಮಾಡಿ ದೊಡ್ಡ ದೊಡ್ಡ ಕಟ್ಟಡ ನಿರ್ಮಾಣ ಮಾಡಿರುವ ಹಲವು ಪ್ರಕರಣಗಳಿವೆ. ಇವುಗಳ ತೆರವು ಕಾರ್ಯಾಚರಣೆಯೀಗ ಮಹಾನಗರ ಪಾಲಿಕೆಗೆ ತಲೆನೋವಾಗಿ ಪರಿಣಮಿಸಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ತುಂಡು ಭೂವಿಗೂ ಬಂಗಾರದ ಬೆಲೆ. ಹೀಗಾಗಿ, ರಸ್ತೆ ಅತಿಕ್ರಮಣ ಮಾಡಿಕೊಂಡು ಕಟ್ಟಡ ಕಟ್ಟುವುದು ಸಾಮಾನ್ಯವಾಗಿದೆ. ಅವುಗಳನ್ನು ತೆರವುಗೊಳಿಸುವುದೀಗ ಪಾಲಿಕೆಗೆ ಸವಾಲಿನ ಕೆಲಸ. ನಗರಲ್ಲಿನ ಪ್ರಮುಖ ಪ್ರದೇಶಗಳ ರಸ್ತೆಗಳನ್ನು ಪ್ರಭಾವಿಗಳು ಅತಿಕ್ರಮಣ ಮಾಡಿದ್ದು, ಪಾಲಿಕೆಯು ಅವುಗಳ ತೆರವು ಕಾರ್ಯಾಚರಣೆ ಚುರುಕುಗೊಳಿಸುತ್ತಿದೆ.
ರಸ್ತೆ ಅಗಲೀಕರಣ ಕುರಿತು ಪಾಲಿಕೆ ಆಯುಕ್ತರ ಪ್ರತಿಕ್ರಿಯೆ.. ಕಾರ್ಯಾಚರಣೆ ನಡೆಸುತ್ತಿರುವ ಮಹಾನಗರ ಪಾಲಿಕೆ ಕೆಲ ರಸ್ತೆಗಳನ್ನು ಗುರುತಿಸಿದೆ. ನಗರದ ತತ್ವದರ್ಶ ಆಸ್ಪತ್ರೆ ಎದುರಿನ ರಸ್ತೆ, ಉಣಕಲ್ ನಗರದ ರಸ್ತೆ, ಸಾಯಿ ನಗರದ ರಸ್ತೆ ಹಾಗೂ ಲಕ್ಷ್ಮಿನಗರದ ರಸ್ತೆಗಳನ್ನು ಅಗಲೀಕರಣ ಮಾಡಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದೆ.
ಸಿಡಿಪಿ ಪ್ರಕಾರ ರಸ್ತೆ ಅಗಲೀಕರಣಕ್ಕೆ ಭೂಸ್ವಾಧೀನ ಮಾಡಿಕೊಂಡು ಭೂಮಿ ಅಥವಾ ನಿವೇಶನ ಕಳೆದುಕೊಂಡವರಿಗೆ ಪರಿಹಾರ ಕೊಡಬೇಕು. ಇದಕ್ಕೆ 12.5 ಕೋಟಿ ಹಣವನ್ನು ಕೊಡಬೇಕಿದ್ದು, ಬಜೆಟ್‌ನಲ್ಲಿ ಹಣ ಮೀಸಡಲಿಡಲಾಗಿದೆ. ಇನ್ನು, ರಸ್ತೆ ಅತಿಕ್ರಮಣ ಮಾಡಿದವರಿಗೆ ಪರಿಹಾರ ಕೊಡುವ ಅವಶ್ಯಕತೆ ಇರಲ್ಲ.
ಇದನ್ನೂ ಓದಿ:ಕುಡಿಯುವ ನೀರಿನ ಸಮಸ್ಯೆ ಎದುರಿಸಲು ದಾವಣಗೆರೆ ಮಹಾನಗರ ಪಾಲಿಕೆ ಸಜ್ಜು
ನಗರದಲ್ಲಿ ರಸ್ತೆ ವಿಸ್ತರಣೆ ಜತೆಗೆ ನಗರದ ಚೆನ್ನಮ್ಮ ವೃತ್ತ ಫ್ಲೈ ಓವರ್ ನಿರ್ಮಾಣಕ್ಕಾಗಿ ನೀಲಿನಕ್ಷೆ ಸಿದ್ಧಪಡಿಸಲಾಗುತ್ತಿದೆ. ಯೋಜನೆಗೆ ಅಡ್ಡಬರುವ ಕಟ್ಟಡಗಳನ್ನು ಗುರುತಿಸುವುದು ಹಾಗೂ ತೆರವುಗೊಳಿಸುವುದು ನ್ಯಾಷನಲ್ ಹೈವೇ ಸುಪರ್ದಿಗೆ ಬರುತ್ತವೆ. ಇನ್ನೂ ಕಟ್ಟಡ ತೆರವುಗೊಳಿಸುವ ಕಾರ್ಯವನ್ನು ಚುರುಕುಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಹೆಚ್ಚುತ್ತಿರುವ ವಾಹನಗಳ ಕಾರಣದಿಂದಾಗಿ ನಗರಗಳಲ್ಲಿ ರಸ್ತೆ ವಿಸ್ತರಣೆ ಅನಿವಾರ್ಯವಾಗಿದ್ದು, ರಸ್ತೆಗಳ ಅತಿಕ್ರಮಣ ತಡೆಗೆ ಪರಿಣಾಮಕಾರಿಯಾದ ಕಾನೂನು ಜಾರಿಯಾಗಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.