ಹುಬ್ಬಳ್ಳಿ: ಅತಿವೃಷ್ಟಿ,ಅನಾವೃಷ್ಟಿ, ಜಲಪ್ರಳಯ ಅಲ್ಲದೆ ಕೊರೊನಾ ಮಹಾಮಾರಿಯಂತಹ ರೋಗಗಳು ಈಗಾಗಲೇ ಸಾಕಷ್ಟು ಭಯ ಹುಟ್ಟಿಸಿದ್ದು, ಈಗ ಹುಬ್ಬಳ್ಳಿ ಮತ್ತು ಬೆಂಗಳೂರಿಗರಿಗೆ ಮತ್ತೊಂದು ಆತಂಕ ಏದುರಾಗುವ ಸಾಧ್ಯತೆ ಇದೆ. ಇದರಿಂದ ಜೀವಸಂಕುಲ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ.
ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ನಗರಗಳು 2050ರ ವೇಳೆಗೆ ‘ಜಲಕಂಟಕ’ಕ್ಕೆ ಒಳಗಾಗುವ ಅಪಾಯವಿದೆ. ಹವಾಮಾನ ವೈಪರೀತ್ಯ ಕಡಿಮೆ ಮಾಡುವ ಕ್ರಮಗಳನ್ನು ತುರ್ತಾಗಿ ತೆಗೆದುಕೊಳ್ಳದೇ ಇದ್ದಲ್ಲಿ, 2050ರ ವೇಳೆಗೆ ಅತೀ ಹೆಚ್ಚು ನೀರಿನ ಕಂಟಕ (ರಿಸ್ಕ್ ಆಫ್ ವಾಟರ್) ಎದುರಿಸುವ ವಿಶ್ವದ 100 ನಗರಗಳ ಪಟ್ಟಿಯಲ್ಲಿ ಹು-ಧಾ ಹಾಗೂ ಬೆಂಗಳೂರು ಸೇರಿದೆ ಎಂದು ವರದಿಯೊಂದು ಹೇಳಿದೆ.
ವರ್ಲ್ಡ್‌ವೈಡ್ ಫಂಡ್ ಫಾರ್ ನೇಚರ್ (ಡಬ್ಲ್ಯುಡಬ್ಲ್ಯುಎಫ್) ಈ ವರದಿಯನ್ನು ನೀಡಿದ್ದು, ವಿಶ್ವದ 100 ನಗರಗಳ ಪಟ್ಟಿಯಲ್ಲಿ ಭಾರತದ 30 ನಗರಗಳು ಈ ಜಲಕಂಟಕಕ್ಕೆ ಒಳಗಾಗಲಿದೆ ಎಂದು ಉಲ್ಲೇಖಿಸಿದೆ. ಭಾರತದ 30 ನಗರ ಪೈಕಿ, ಬೆಂಗಳೂರು ಹಾಗೂ ಹುಬ್ಬಳ್ಳಿ-ಧಾರವಾಡ ಕೂಡ ಸೇರಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.