ಹುಬ್ಬಳ್ಳಿ:ಮಣಿಪುರದ ಗಲಭೆಗೆ ಮೂಲಭೂತ ಕಾರಣಗಳನ್ನು ಕೇಂದ್ರ ಸರ್ಕಾರ ಆರಂಭದಲ್ಲಿ ಹುಡುಕಬೇಕಿತ್ತು. ಆರಂಭದಲ್ಲಿ ಅಲ್ಲಿನ ರಾಜ್ಯ ಸರ್ಕಾರ ಗಲಭೆ ತಡೆಯಲು ವಿಫಲವಾಗಿದೆ. ಇದರಲ್ಲಿ ಮಣಿಪುರದ ಸಿಎಂ ಅವರ ವೈಫಲ್ಯಗಳು ಎದ್ದು ಕಾಣುತ್ತಿವೆ. ಈ ಸಮಯದಲ್ಲಿ ಕೇಂದ್ರ ಸರ್ಕಾರದ ಮಧ್ಯಸ್ಥಿಕೆ ವಹಿಸಿ ಪರಿಹರಿಸಬೇಕಿತ್ತು. ಆದರೆ, ಇದು ಆಗದಿರುವ ಹಿನ್ನೆಲೆ ಈಗ ಅದು ವಿಕೋಪಕ್ಕೆ ಹೋಗಿದೆ ಎಂದು ವಿಧಾನಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ವಿಶ್ಲೇಷಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಲಿನ ಜನತೆ ಸಿಎಂ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಅಲ್ಲಿನ ಸಿಎಂ ಗಲಭೆಯ ನೈತಿಕ ಹೊಣೆ ಹೊತ್ತು ತಕ್ಷಣವೇ ಸಿಎಂ ರಾಜೀನಾಮೆ ನೀಡಬೇಕಿತ್ತು ಎಂದು ಆಪಾದನೆ ಮಾಡಿದರು. ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಬರಬೇಕಿದೆ. ಮಹಿಳೆಯರ ನಗ್ನ ಮೆರವಣಿಗೆ ಪೈಶಾಚಿಕ ಕೃತ್ಯ ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಕೇಂದ್ರ ಸರ್ಕಾರ ಬರೀ ಬಾಯಿ ಮಾತಿನಲ್ಲಿ ಕಠಿಣ ಕ್ರಮ ಅನ್ನಬಾರದು ಇದು ಕಾರ್ಯರೂಪಕ್ಕೆ ಬರಬೇಕು ಎಂದು ಕೇಂದ್ರಕ್ಕೆ ಒತ್ತಾಯಿಸಿದರು.
ನಂದಿನಿ ಹಾಲಿನ ದರ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಹಾಲಿನ ದರ ಏರಿಕೆ ಮಾಡಬೇಕು ಎನ್ನುವ ಬಹಳಷ್ಟು ದಿನದಿಂದ ಸರ್ಕಾರದ ಮುಂದೆ ಇತ್ತು. ಈ ಬಗ್ಗೆ ರೈತ ಮತ್ತು ಸರಬರಾಜು ಮಾಡುವವರ ಜೊತೆಗೆ ಚರ್ಚೆ ನಡೆಯುತ್ತಿದೆ. ಎಲ್ಲ ಅಗತ್ಯ ವಸ್ತುಗಳ ದರ ಏರಿಕೆಯಾಗಿದೆ. ಏನಾದರೂ ಯೋಜನೆ ಜಾರಿ ಮಾಡಬೇಕಾದರೆ, ದರ ಏರಿಕೆ ಅನಿವಾರ್ಯವಾಗುತ್ತದೆ. ಇನ್ನೂ ಜಾರಿಯಾಗಿಲ್ಲ. ಇನ್ನೂ ಸಮಯ ಇದೆ. ಇನ್ನೂ ಯಾವ ರೂಪದಲ್ಲಿ ಏರಿಕೆ ಆಗಲಿದೆ ನೋಡೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹಿಂದಿನ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯವೇ ಕಾರಣ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ