ಧಾರವಾಡ :ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದರೆ, ಜನಪರ ಕೆಲಸ ಮಾಡಿದರೆ ಅವರಿಗೆ ಪ್ರಶಸ್ತಿ ನೀಡಲಾಗುವುದು. ಅಲ್ಲದೇ ತಪ್ಪು ಮಾಡಿದರೆ ಅಮಾನತು ಮಾತ್ರವಲ್ಲ. ಕ್ರಿಮಿನಲ್ ಪ್ರಕರಣವನ್ನು ದಾಖಲಿಸುತ್ತೇವೆ ಎಂದು ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ ನೀಡಿದರು.
ನಗರದಲ್ಲಿ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಆಡಳಿತ ಸುಧಾರಣೆ ಕಂದಾಯ ಇಲಾಖೆಯ ಮೂಲಕವೇ ಆಗಬೇಕು. ಹೀಗಾಗಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕು. ಒಳ್ಳೆ ಕೆಲಸ ಮಾಡಿದವರಿಗೆ ಸರ್ವೋತ್ತಮ ಅಧಿಕಾರಿ ಪ್ರಶಸ್ತಿ ಕೊಡುತ್ತೇವೆ. ಒಳ್ಳೆಯ ಮಾತಿಗೆ ಬಗ್ಗದೇ ತಪ್ಪು ಮಾಡುವವರೂ ಇದ್ದಾರೆ. ಅಂಥವರಿಗೆ ಅವರದೇ ಮಾತಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ವಂಚನೆ ಮಾಡಿದ ಅಧಿಕಾರಿಗಳನ್ನು ಅಮಾನತು ಮಾಡುತ್ತೇವೆ. ಜೊತೆಗೆ ಕ್ರಿಮಿನಲ್ ಕೇಸ್ ಕೂಡ ಹಾಕುತ್ತೇವೆ. ಕೆಲವರ ಉದ್ದೇಶವೇ ಭ್ರಷ್ಟಾಚಾರ ಆಗಿರುತ್ತದೆ. ಅದು ಕ್ರಿಮಿನಲ್ ಪ್ರಕರಣ ಆಗುತ್ತದೆ. ಈಗಾಗಲೇ ಇಬ್ಬರು ಎಸಿಗಳ ಮೇಲೆ ಕ್ರಿಮಿನಲ್ ಕೇಸ್ ಆಗಿದೆ. ಇಲ್ಲಿವರೆಗೆ ಬಡಪಾಯಿ ಗ್ರಾಮ ಲೆಕ್ಕಾಧಿಕಾರಿಗಳ ಮೇಲೆ ಕ್ರಮ ಆಗುತ್ತಿತ್ತು. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂದು ಹೇಳುತ್ತಿದ್ದರು. ಆದರೆ, ಈಗ ತಪ್ಪು ಮಾಡಿದ ಎಸಿಗಳ ಮೇಲೆ ಕ್ರಮ ತೆಗೆದುಕೊಂಡಿದ್ದೇವೆ. ಹಿಂದೆ ಹೇಗೆ ಕೆಲಸ ಮಾಡಿದ್ದಿರಿ ಎಂದು ನಾವು ಕೇಳುವುದಿಲ್ಲ. ಆದರೆ, ಈಗ ಜನ ಪರವಾಗಿ ಕೆಲಸ ಮಾಡಬೇಕು ಎಂದರು.