ಧಾರವಾಡ: ರಾಜ್ಯದಲ್ಲಿ ಸುಮಾರು 13 ಜಿಲ್ಲೆಗಳಲ್ಲಿ ಪ್ರವಾಹ ಬಂದಿದೆ. ಜಿಲ್ಲೆಯ ಅಳ್ನಾವರ ಪ್ರದೇಶದ ಪ್ರವಾಹದ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ರಾಜ್ಯದಲ್ಲಿ ಪ್ರವಾಹದಿಂದ ಲಕ್ಷಾಂತರ ಕುಟುಂಬಗಳು ಬೀದಿ ಪಾಲಾಗಿವೆ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಹೇಳಿದರು.
ಅಳ್ನಾವರ ಪಟ್ಟಣದ ಪ್ರವಾಹ ಸ್ಥಳಗಳಿಗೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು 374 ಹಳ್ಳಿಗಳು ಸಂಪೂರ್ಣವಾಗಿ ಹಾನಿಯಾಗಿವೆ. ಖಾನಾಪುರ ತಾಲೂಕುವೊಂದರಲ್ಲೇ 10 ಸಾವಿರ ಮನೆ ಬಿದ್ದಿವೆ. ಹಳ್ಳಿಗೆ ಹಳ್ಳಿಗಳೇ ನಾಶವಾಗಿವೆ. ಇವತ್ತಿನವರೆಗೂ ಬಿಡಿಗಾಸು ಬಂದಿಲ್ಲ. ನಿನ್ನೆಯಷ್ಟೇ ಸರ್ಕಾರ, ಒಂದು ಕುಟುಂಬಕ್ಕೆ ಹತ್ತು ಸಾವಿರ ಕೊಡುವ ಆದೇಶ ಮಾಡಿದೆ. 5 ಲಕ್ಷ ಕೊಡ್ತೇವಿ, ಬಾಡಿಗೆ ಕೊಡ್ತೇನಿ ಅಂತಿದಾರೆ. ಆ ಬಗ್ಗೆ ಹೆಚ್ಚಿಗೆ ಮಾತನಾಡಲಾರೆ. ಇಷ್ಟು ದಿನ ಪಾಪ ಯಡಿಯೂರಪ್ಪ ಒಂಟಿಯಾಗಿ ತಿರುಗುತ್ತಿದ್ದರು. ಈಗ ಮಂತ್ರಿಮಂಡಲ ರಚನೆಯಾಗಿದೆ. ಈ 17 ಜನ ಮಂತ್ರಿಗಳನ್ನು ಕೂಡಲೇ ಪ್ರವಾಹ ಪೀಡಿತ ಪ್ರದೇಶಕ್ಕೆ ಕಳುಹಿಸಬೇಕು ಎಂದು ಆಗ್ರಹಿಸಿದರು.
ಆಯಾ ಸಚಿವರು ಜಿಲ್ಲಾಧಿಕಾರಿಗಳ ಜೊತೆ ಕುಳಿತು ಪರಿಹಾರದ ಬಗ್ಗೆ ಸಭೆ ಮಾಡಬೇಕು. ಹಿಂದೆಲ್ಲ ಮನೆ ಬಿದ್ದರೆ 5-10 ಸಾವಿರ ಕೊಡುತ್ತಿದ್ದರು. ಕುಮಾರಸ್ವಾಮಿ ಸರ್ಕಾರ ಬಂದ ಮೇಲೆ ಅದು ಬದಲಾಗಿದೆ. ಸರ್ಕಾರ ಈಗ ಕಾನೂನು ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಕಾನೂನು ಸಡಿಲ ಮಾಡಿ ನೊಂದ ಕುಟುಂಬಗಳನ್ನು ಉಳಿಸಬೇಕು ಎಂದು ಮನವಿ ಮಾಡಿಕೊಂಡರು.