ಹುಬ್ಬಳ್ಳಿ:ನಗರ ಹಸಿರೀಕರಣ ಯೋಜನೆಯಲ್ಲಿ ಅವ್ಯವಹಾರ ಆರೋಪದಡಿ ಆಗಿನ ಹುಬ್ಬಳ್ಳಿ ಆರ್ಎಫ್ಒ ವಿರುದ್ಧ ಧಾರವಾಡ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.
2014-15 ಮತ್ತು 2015-16 ನೇ ಸಾಲಿನ ನಗರ ಹಸಿರೀಕರಣ ಯೋಜನೆಯಡಿ ಹುಬ್ಬಳ್ಳಿ ಅರಣ್ಯ ವಲಯದಲ್ಲಿ ಭಾರಿ ಪ್ರಮಾಣದ ಅವ್ಯವಹಾರ ನಡೆದಿದ್ದು, ಸಂಬಂಧಿಸಿದವರ ವಿರುದ್ದ ಕ್ರಮ ಜರುಗಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿ, ಆರೋಪ ಮೇಲ್ನೋಟಕ್ಕೆ ಸಾಬೀತಾಗಿದ್ದರಿಂದ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು ಆರ್ಎಫ್ಒ ಸಿ.ಹೆಚ್. ಮಾವಿನತೋಪ ಮತ್ತು ಗುತ್ತಿಗೆದಾರರ ವಿರುದ್ಧ ದೂರು ದಾಖಲಿಸಿ ಬಂಧಿಸಲಾಗಿದೆ.
ಎಸಿಬಿಯಿಂದ ಪತ್ರಿಕಾ ಪ್ರಕಟನೆ ಇದನ್ನೂ ಓದಿ: ಟಿಪ್ಪರ್ ಡಿಕ್ಕಿ ಹೊಡೆಸಿ ಕಾಂಗ್ರೆಸ್ ಮುಖಂಡನ ಕೊಲೆ ಯತ್ನ; ಎಂಎಲ್‌ಸಿ ಪುತ್ರನ ವಿರುದ್ಧ ಆರೋಪ
ಎಸಿಬಿ ಉತ್ತರ ವಲಯ ಪೊಲೀಸ್ ಅಧೀಕ್ಷಕ ಬಿ.ಎಸ್ ನೇಮಗೌಡ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖೆ ನಡೆಸಿದ ಡಿಎಸ್ಪಿ ಎಲ್.ವೇಣುಗೋಪಾಲ್, ತನಿಖಾ ಸಹಾಯಕ ಶಿವಾನಂದ ಕೆ.ಕೆಲವಡಿ ಅವರು, ನಗರ ಹಸಿರೀಕರಣ ಯೋಜನೆಯಡಿ ಸುಮಾರು 1 ಕೋಟಿ 20 ಲಕ್ಷ ರೂ. ಹಣ ದುರುಪಯೋಗವಾದ ಬಗ್ಗೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದು, ಇಂದು ಸಿ.ಹೆಚ್.ಮಾವಿನತೋಪ, ದತಾತ್ರೇಯ ಪಾಟೀಲ, ವಿನಾಯಕ ಪಾಟೀಲ ಸೇರಿದಂತೆ ಗುತ್ತಿಗೆದಾರರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ್ದು, ಪ್ರಕರಣದ ತನಿಖೆ ಮುಂದುವರೆಯುತ್ತಿದೆ.