ಹುಬ್ಬಳ್ಳಿ :ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ (ಎನ್‌ಡಬ್ಲ್ಯೂಕೆಆರ್‌ಟಿಸಿ) ನಷ್ಟದಿಂದಲೇ ಯಾವಾಗಲೂ ಸುದ್ದಿಯಲ್ಲಿರುವ ಸಂಸ್ಥೆ. ಇದೇ ಸಂಸ್ಥೆ ನಿವೃತ್ತ ಸಿಬ್ಬಂದಿಯೊಬ್ಬರಿಗೆ ಗ್ರಾಚ್ಯುಟಿ ಹಣ ಕೊಡದೆ ಕಿರುಕುಳ ನೀಡುತ್ತಿರುವ ಆರೋಪಕ್ಕೆ ಗುರಿಯಾಗಿದೆ. ಸಾರಿಗೆ ಇಲಾಖೆಯ ನಡವಳಿಕೆಯಿಂದ ಬೇಸತ್ತು ನಿವೃತ್ತ ನೌಕರರೊಬ್ಬರು ನೇರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಹುಬ್ಬಳ್ಳಿಯ ಗೋಕುಲ್ ರಸ್ತೆಯ ಕಿರ್ಲೋಸ್ಕರ್ ಲೇಔಟ್ ನಿವಾಸಿ ಹನಮಂತ ಆರ್.ಅಂಕುಶ್ ಎಂಬವರು ತನಗೆ ಸಿಗಬೇಕಾದ ಗ್ರಾಚ್ಯುಟಿ ಹಣ ನೀಡದ ಸಾರಿಗೆ ಇಲಾಖೆ ಅಧಿಕಾರಿಗಳ ವಿರುದ್ದ ರೋಸಿ ಹೋಗಿದ್ದಾರೆ. 36 ವರ್ಷಗಳಿಂದ ಇಲಾಖೆಯಲ್ಲಿ ಕೆಲಸ ಮಾಡಿ ಕಳೆದ ವರ್ಷ ನಿವೃತ್ತರಾಗಿರುವ ಹನಮಂತ ಅವರಿಗೆ ಇಲಾಖೆಯಿಂದ ಬರಬೇಕಾದ ಗ್ರಾಚ್ಯುಟಿ ಹಾಗೂ ರಜೆ ನಗದೀಕರಣದ ಸೇರಿ ಸುಮಾರು 18 ಲಕ್ಷ ರೂಪಾಯಿ ಬಂದಿಲ್ಲ ಎಂದು ಹೇಳಿದ್ದಾರೆ.
ಹಲವು ಬಾರಿ ಹುಬ್ಬಳ್ಳಿಯ ಸಾರಿಗೆ ಇಲಾಖೆ ಅಧಿಕಾರಿಗಳ ಬಳಿಗೆ ಅಲೆದಾಡಿ ಸುಸ್ತಾಗಿರುವ ಹನಮಂತ ಇದೀಗ ಪ್ರಧಾನಿಗೆ ಪತ್ರ ರವಾನಿಸಿದ್ದಾರೆ. 18 ಲಕ್ಷದಲ್ಲಿ ನನಗೆ 6.5 ಲಕ್ಷ ರೂಪಾಯಿ ಅವಶ್ಯಕತೆ ಇದೆ, ಹಣ ಕೊಡಿಸಿ ಎಂದು ಮನವಿ ಮಾಡಿದ್ದಾರೆ. ಮಾನವೀಯತೆಯ ಆಧಾರದ ಮೇಲೆ ಹನಮಂತ ತನಗೆ ಸಿಗಬೇಕಾದ ಹಣಕ್ಕೆ ಸಿಎಂ ಬಸವರಾಜ ಬೊಮ್ಮಾಯಿಗೂ ಪತ್ರ ಕಳುಹಿಸಿದ್ದಾರೆ. ಹೀಗಿದ್ದರೂ ಇದುವರೆಗೂ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ. ಹೀಗಾಗಿ ದುಡಿದ ಹಣ ಕಷ್ಟಕಾಲದಲ್ಲಿ ಸಿಗದೇ ಇರುವುದಕ್ಕೆ ಅಧಿಕಾರಿಗಳ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.