ಹುಬ್ಬಳ್ಳಿ:ಸಹಕಾರಿ ಭೀಷ್ಮ ಕೆ.ಎಚ್.ಪಾಟೀಲ್ ಅವರ ಪ್ರತಿಮೆಯನ್ನು ರಾತ್ರಿ ವೇಳೆ ತೆರವುಗೊಳಿಸಿದ್ದಕ್ಕೆ ಪ್ರತಿಷ್ಠಾನದ ಪ್ರಮುಖರು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಇಲ್ಲಿನ ಮಹಾನಗರ ಪಾಲಿಕೆ ಈಜುಕೊಳದ ಮುಂಭಾಗದಲ್ಲಿ ಕಳೆದ 31 ವರ್ಷಗಳ ಹಿಂದೆ ಸಹಕಾರಿ ಭೀಷ್ಮ ಕೆ.ಎಚ್.ಪಾಟೀಲರ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಪ್ರತಿಷ್ಠಾನದ ಗಮನಕ್ಕೆ ತರದೆಯೇ ತೆರವುಗೊಳಿಸಿ ಇಂದಿರಾ ಗಾಜಿನ ಮನೆಯಲ್ಲಿರಿಸಿದ್ದ ವಿಷಯ ತಿಳಿದ ಕೈ ನಾಯಕರು ಹಾಗೂ ಪ್ರತಿಷ್ಠಾನದ ಪ್ರಮುಖರು ಸ್ಥಳಕ್ಕೆ ಆಗಮಿಸಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ವಿರುದ್ಧ ಅಸಮಾಧಾನ ಹೊ ಹಾಕಿದರು.
ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಮಾಜಿ ಸಚಿವ ಎ.ಎಮ್. ಹಿಂಡಸಗೇರಿ ಮಾತನಾಡಿ, "ಅಭಿವೃದ್ಧಿ ವಿಚಾರಕ್ಕೆ ಎಂದೂ ವಿರೋಧ ವ್ಯಕ್ತಪಡಿಸಿಲ್ಲ. ಕಾಮಗಾರಿಗೆ ಪ್ರತಿಮೆಗೆ ಒಂದು ವೇಳೆ ಅಡಚಣೆ ಆಗಿದ್ದರೆ, ನಮಗೆ ತಿಳಿಸಿದರೆ ನಾವೇ ವಿಧಿವಿಧಾನದ ಮೂಲಕ ತೆರವುಗೊಳಿಸುತ್ತಿದ್ದೆವು. ಆದರೆ ಕಳ್ಳರಂತೆ ರಾತ್ರೋ ರಾತ್ರಿ ಸಹಕಾರಿ ಧುರೀಣರ ಪ್ರತಿಮೆಯನ್ನು ತೆರವುಗೊಳಿಸುವ ಮೂಲಕ ಸಹಕಾರಿ ರಂಗಕ್ಕೆ ಅವಮಾನ ಮಾಡಿದ್ದಾರೆ. ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಆಯುಕ್ತ ಬಿಜೆಪಿ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ. ಮಹಾನ್ ವ್ಯಕ್ತಿಗಳ ಇತಿಹಾಸ ಸಾಧನೆ ಅರಿಯದೇ ಹೊಲಸು ರಾಜಕಾರಣ ಮಾಡುತ್ತಿರುವುದು ದುರದೃಷ್ಟಕರ" ಎಂದರು.
ಕಾಂಗ್ರೆಸ್ ಮುಖಂಡ ವಸಂತ ಲದ್ವಾ ಮಾತನಾಡಿ, "ಇದು ರಾಜಕೀಯ ದುರುದ್ದೇಶದಿಂದ ಮಾಡಿರುವ ಕೃತ್ಯ. ಕಾಂಗ್ರೆಸ್ ಪಕ್ಷ ಹಾಗೂ ಸಹಕಾರಿಗಳು ಈ ನಡೆಯನ್ನು ಉಗ್ರ ಹೋರಾಟದ ಮೂಲಕ ಖಂಡಿಸುತ್ತೇವೆ. ಕಾನೂನು ಬಾಹಿರವಾಗಿ ತೆರವುಗೊಳಿಸಿರುವ ಅಧಿಕಾರಗಳನ್ನು ಕೂಡಲೇ ಅಮಾನತುಗೊಳಿಸಬೇಕು. ಶೀಘ್ರದಲ್ಲೇ ಈ ಬಗ್ಗೆ ಚರ್ಚಿಸಿ ಹೋರಾಟಕ್ಕೆ ಅಣಿಯಾಗುತ್ತೇವೆ" ಎಂದು ಎಚ್ಚರಿಕೆ ನೀಡಿದರು.