ಹುಬ್ಬಳ್ಳಿ:ಕೊರೊನಾ ಇಡೀ ಮಾನವ ಕುಲವನ್ನೇ ತಲ್ಲಣಗೊಳಿಸಿದೆ. ಯುವಕ-ಯುವತಿಯರು ಕೆಲಸವಿಲ್ಲದೆ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯತ್ತ ಮುಖಮಾಡುತ್ತಿದ್ದಾರೆ. ಜೊತೆಗೆ ಸೋಂಕು ತಗುಲಿ ನಾನು ಸತ್ತರೆ ನನ್ನ ಕುಟುಂಬದ ಗತಿಯೇನು? ಎರಡು ದಿನಗಳಿಂದ ನೆಗಡಿಯಾಗಿದ್ದು, ಭಯವಾಗುತ್ತಿದೆ. ನನಗೂ ಕೊರೊನಾ ಬಂದಿರಬಹುದು? ಕೊರೊನಾ ಬಂದರೆ ಸಾವೇ ಪರಿಹಾರ ಎಂದು ಕೆಲವರು ಅಂದುಕೊಳ್ಳುವ ಮಟ್ಟಕ್ಕೆ ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ.
ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸೋಂಕಿತರನ್ನು ಸಮಾಜದಲ್ಲಿ ಮನುಷ್ಯರಂತೆ ಕಾಣಬೇಕಿದೆ ಎಂದು ಸರ್ಕಾರ ಮನವಿ ಮಾಡಿಕೊಳ್ಳುತ್ತಿದೆ. ಆದರೂ ಸೋಂಕಿತರನ್ನು ಕೀಳಾಗಿ, ಅಸ್ಪೃಶ್ಯ, ಅಪರಾಧಿಗಳಂತೆ ನೋಡಲಾಗುತ್ತಿದೆ. ಇದರಿಂದ ಅವರು ಮಾನಸಿಕ ಖಿನ್ನತೆ, ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ, ಸಮಾಜ ಪೀಡಿತರನ್ನು ನೋಡುವ ಪರಿ ಬದಲಾಗಬೇಕಿದೆ ಎಂದು ಮಾನಸಿಕ ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.