ಕರ್ನಾಟಕ

karnataka

ETV Bharat / state

ಕಳ್ಳಭಟ್ಟಿ ದಂಧೆಯಿಂದ ಮುಕ್ತರಾದವರಿಗೆ ಪುನರ್ವಸತಿ ಕಲ್ಪಿಸಿ: ದೀಪಾ ಚೋಳನ್ - latest darwad news

ಕಳ್ಳಭಟ್ಟಿ ದಂಧೆಯಿಂದ ಮುಕ್ತರಾದವರಿಗೆ ಪುನರ್ವಸತಿ ಕಲ್ಪಿಸಲು ಆಯವ್ಯಯದಲ್ಲಿ ಪ್ರಸ್ತಾಪಿಸಿರುವಂತೆ ಸರ್ಕಾರದ ವಿವಿಧ ನಿಗಮಗಳ ಮೂಲಕ ನೆರವು ನೀಡಲು ಯೋಜನೆ ರೂಪಿಸಲಾಗಿದೆ. ಸ್ವೀಕೃತವಾಗಿರುವ 72 ಅರ್ಜಿಗಳನ್ನು ಸಂಬಂಧಿಸಿದ ನಿಗಮಗಳಿಗೆ ರವಾನಿಸಿ ಸಾಲ ಸೌಲಭ್ಯಗಳನ್ನು ಆದ್ಯತೆಯಡಿ ಮಂಜೂರು ಮಾಡಬೇಕೆಂದು ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಅಧಿಕಾರಿಗಳಿಗೆ ಸೂಚಿಸಿದರು.

ಕಳ್ಳಭಟ್ಟಿ ದಂಧೆಯಿಂದ ಮುಕ್ತರಾದವರಿಗೆ ಪುನರ್ವಸತಿ ಕಲ್ಪಿಸಿ: ದೀಪಾ ಚೋಳನ್

By

Published : Sep 18, 2019, 6:13 PM IST

ಧಾರವಾಡ: ಕಳ್ಳಭಟ್ಟಿ ದಂಧೆಯಿಂದ ಮುಕ್ತರಾದವರಿಗೆ ಪುನರ್ವಸತಿ ಕಲ್ಪಿಸಲು ಆಯವ್ಯಯದಲ್ಲಿ ಪ್ರಸ್ತಾಪಿಸಿರುವಂತೆ ಸರ್ಕಾರದ ವಿವಿಧ ನಿಗಮಗಳ ಮೂಲಕ ನೆರವು ನೀಡಲು ಯೋಜನೆ ರೂಪಿಸಲಾಗಿದೆ. ಜಿಲ್ಲೆಯಲ್ಲಿ ಸ್ವೀಕೃತವಾಗಿರುವ 72 ಅರ್ಜಿಗಳನ್ನು ಸಂಬಂಧಿಸಿದ ನಿಗಮಗಳಿಗೆ ರವಾನಿಸಿ ಸಾಲ ಸೌಲಭ್ಯಗಳನ್ನು ಆದ್ಯತೆಯಡಿ ಮಂಜೂರು ಮಾಡಬೇಕೆಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಅಬಕಾರಿ ಇಲಾಖೆಯ ಸ್ಥಾಯಿ ಸಮಿತಿ ಹಾಗೂ ಜಿಲ್ಲಾ ಅಬಕಾರಿ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್ ಸೂಚಿಸಿದರು.

ಜನಸಂಖ್ಯಾ ಸಂಯೋಜನೆ ಆಧಾರದಲ್ಲಿ ಕಳ್ಳಭಟ್ಟಿ ತಯಾರಿಕಾ ದಂಧೆಯಲ್ಲಿ ತೊಡಗಿರುವವರ ಮಾಹಿತಿ ಸಂಗ್ರಹಿಸಬೇಕು. ಹೆಚ್ಚಿನ ಮಟ್ಟದಲ್ಲಿ ಅದರಲ್ಲೂ ಬೆಳಗಿನ ಜಾವಗಳಲ್ಲಿ ದಾಳಿಗಳನ್ನು ಕೈಗೊಂಡು ಸಂಶಯ ಇರುವ ಮನೆಗಳ ಮೇಲೆ ಶೋಧ ಕಾರ್ಯ ನಡೆಸಬೇಕು. ಪೊಲೀಸ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಸಹಕಾರ ಪಡೆಯಬೇಕು. ಗ್ರಾಮಸಭೆಗಳಲ್ಲಿ ಹಿರಿಯ ಅಧಿಕಾರಿಗಳು ಭಾಗವಹಿಸಿ ಸ್ತ್ರೀ ಶಕ್ತಿ ಸಂಘಗಳ ಸದಸ್ಯರು, ಗ್ರಾಮದ ಹಿರಿಯರು, ಯುವಕರು ಹಾಗೂ ಸ್ಥಳೀಯರಿಗೆ ಕಳ್ಳಭಟ್ಟಿಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳುವಳಿಕೆ ನೀಡಬೇಕೆಂದು ಹೇಳಿದರು.

ಕಳ್ಳಭಟ್ಟಿ ದಂಧೆಯಿಂದ ಮುಕ್ತರಾದವರಿಗೆ ಪುನರ್ವಸತಿ ಕಲ್ಪಿಸಿ: ದೀಪಾ ಚೋಳನ್

ಅಷ್ಟೇ ಅಲ್ಲದೇ, ಪ್ರದೇಶದಲ್ಲಿನ ಹಳೆಯ ಆರೋಪಿಗಳ ಚಲನವಲನ ಹಾಗೂ ಅವರು ಸದ್ಯ ನಿರ್ವಹಿಸುತ್ತಿರುವ ಕಸುಬು, ವಾಸಸ್ಥಳಗಳ ಮೇಲೆ ನಿಗಾ ಇಡಬೇಕು. ಸೂಕ್ತ ಸ್ಥಳಗಳಲ್ಲಿ ಪಾಯಿಂಟ್ ಬುಕ್‌ಗಳನ್ನು ಇರಿಸಿ ಮಾಹಿತಿ ದಾಖಲಿಸಬೇಕು. ಕಳ್ಳಭಟ್ಟಿ ಚಟುವಟಿಕೆಗಳಿಗೆ ಮುಖ್ಯ ಕಚ್ಚಾವಸ್ತುವಾಗಿರುವ ಬೆಲ್ಲ ಸರಬರಾಜಾಗುವ ಮೂಲವನ್ನು ಪತ್ತೆ ಹಚ್ಚಿ ನಿಲ್ಲಿಸಬೇಕು. ಅಕ್ರಮಗಳನ್ನು ತಡೆಯಲು ಪಂಚಾಯತ್ ಸದಸ್ಯರುಗಳಿಗೆ ವೈಯಕ್ತಿಕವಾಗಿ ಅಬಕಾರಿ ಕಾಯ್ದೆಯ ಕಲಂ 50 ರಡಿ ನೋಟೀಸ್ ನೀಡಿ ಅವರನ್ನೂ ಸಹ ಜವಾಬ್ದಾರರನ್ನಾಗಿಸಬೇಕು. ಮೂರು ಅಥವಾ ಮೂರಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವ ಅರೋಪಿಗಳನ್ನು ಗೂಂಡಾ ಕಾಯ್ದೆಯಡಿ ಸೇರಿಸಲು ಪ್ರಸ್ತಾವನೆಗಳನ್ನು ಸಿಆರ್‌ಪಿಸಿ ಕಲಂ 108 ಮತ್ತು 110 ಅಡಿಯಲ್ಲಿ ಸಲ್ಲಿಸಬೇಕೆಂದು ತಿಳಿಸಿದರು.

ಬಳಿಕ ಅಬಕಾರಿ ಉಪ ಆಯುಕ್ತ ಶಿವನಗೌಡ ಪಾಟೀಲ್​ ಮಾತನಾಡಿ, ಜಿಲ್ಲೆಯಾದ್ಯಂತ 26 ಕಳ್ಳಭಟ್ಟಿ ಕೇಂದ್ರಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗಿದೆ. ಇನ್ನೂ ಎರಡು ಕೇಂದ್ರಗಳಲ್ಲಿ ಕಳ್ಳಭಟ್ಟಿ ತಯಾರಿಕೆ ಆಗಾಗ ನಡೆಯುತ್ತಿರುವ ಬಗ್ಗೆ ಅನುಮಾನಗಳಿವೆ. ಅದನ್ನು ತಡೆಯುವ ನಿಟ್ಟಿನಲ್ಲಿ ನಿರಂತರವಾಗಿ ದಾಳಿ ಮಾಡಲಾಗುತ್ತಿದೆ. 2018-19 ರಲ್ಲಿ 119 ಘೋರ ಪ್ರಕರಣಗಳು, ನಾಲ್ಕು ಕಳ್ಳಭಟ್ಟಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ನಾಲ್ವರು ಆರೋಪಿಗಳನ್ನು ದಸ್ತಗಿರಿ ಮಾಡಿದ್ದು, 62 ಲೀಟರ್ ಬೆಲ್ಲದ ಕೊಳೆ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ರು.

523.150 ಲೀಟರ್ ನೀರು ಮಿಶ್ರಿತ ಮದ್ಯಸಾರ ವಶಪಡಿಸಿಕೊಳ್ಳಲಾಗಿದೆ. ಕಳ್ಳಭಟ್ಟಿ ದಂಧೆಯಿಂದ ಮುಕ್ತರಾದವರಿಗೆ ಪುನರ್ವಸತಿ ಕಲ್ಪಿಸಲು ಸ್ವೀಕೃತವಾಗಿರುವ 72 ಅರ್ಜಿಗಳನ್ನು ವಿವಿಧ ನಿಗಮಗಳಿಗೆ ರವಾನಿಸಿ ಸಾಲ ಸೌಲಭ್ಯಗಳನ್ನು ಮಂಜೂರು ಮಾಡಲು ಕೋರಲಾಗಿದೆ. ಈಗಾಗಲೇ ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ 16 ಫಲಾನುಭವಿಗಳಿಗೆ ಸೌಲಭ್ಯವನ್ನು ಒದಗಿಸಲಾಗಿದೆ. ಕಳ್ಳಭಟ್ಟಿ ದಂಧೆಯನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಲು ಬಹುಮುಖಿ ವಿಧಾನ ಹಾಗೂ ಬಹುಸಾಂಸ್ಥಿಕ ವಿಧಾನ ಅನುಸರಿಸಲಾಗುತ್ತಿದೆ. ಶಾಲಾ ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಮೂಲಕವೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಅರಣ್ಯ ಪ್ರದೇಶದಲ್ಲಿ ಇದನ್ನು ತಡೆಗಟ್ಟಲು ಅರಣ್ಯ ಹಿತ ಸಂರಕ್ಷಣಾ ಸಭೆಗಳನ್ನು ನಡೆಸಲಾಗುವುದು ಎಂದು ಅವರು ವಿವರಿಸಿದರು.

ABOUT THE AUTHOR

...view details