ಧಾರವಾಡ: ಎರಡು ದಶಕಗಳ ಬಳಿಕ ತಾಲಿಬಾನಿಗಳು ಮೇಲುಗೈ ಸಾಧಿಸಿ ಅಫ್ಘಾನಿಸ್ತಾನ ವಶಕ್ಕೆ ಪಡೆದುಕೊಂಡಿದ್ದಾರೆ. ಉನ್ನತ ವ್ಯಾಸಂಗಕ್ಕಾಗಿ ವಿದ್ಯಾಕಾಶಿಗೆ ಆಗಮಿಸಿರುವ ಆಫ್ಘನ್ ವಿದ್ಯಾರ್ಥಿಗಳಲ್ಲಿ ಆತಂಕ ಮನೆ ಮಾಡಿದೆ.
ವಿದ್ಯಾರ್ಥಿಗಳ ಕಣ್ಣೀರು..
ಹೌದು, ಧಾರವಾಡ ಪ್ರತಿಷ್ಠಿತ ಕೃಷಿ ವಿಶ್ವವಿದ್ಯಾಲಯದಲ್ಲಿ ದೂರದ ಅಫ್ಘಾನಿಸ್ತಾನದಿಂದ ಬಂದಿರುವ ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕೃಷಿ ವಿವಿಯಲ್ಲಿರುವ ಅಂತಾರಾಷ್ಟ್ರೀಯ ವಸತಿ ನಿಲಯದಲ್ಲಿದ್ದಾರೆ. ಸುಮಾರು 15 ಜನ ವಿದ್ಯಾರ್ಥಿಗಳಿದ್ದು, ಅದರಲ್ಲಿ ಐವರು ವಿದ್ಯಾರ್ಥಿಗಳು ಕೊರೊನಾ ಸಂದರ್ಭದಲ್ಲಿ ಸ್ವದೇಶಕ್ಕೆ ತೆರಳಿದ್ದಾರೆ. ಆದ್ರೆ ಇಲ್ಲೇ ಉಳಿದಿರುವ ವಿದ್ಯಾರ್ಥಿಗಳು ತಮ್ಮ ದೇಶದ ಪರಿಸ್ಥಿತಿ ನೋಡಿ ಕಣ್ಣೀರಿಡುವಂತಾಗಿದೆ.
ಧಾರವಾಡದಲ್ಲಿ ಓದುತ್ತಿರುವ ಅಫ್ಘನ್ ವಿದ್ಯಾರ್ಥಿಗಳ ಪ್ರತಿಕ್ರಿಯೆ 10 ವಿದ್ಯಾರ್ಥಿಗಳು ಧಾರವಾಡದಲ್ಲಿ ಉಳಿದುಕೊಂಡಿದ್ದು, ತಮ್ಮ ಕುಟುಂಬದ ಬಗ್ಗೆ ಚಿಂತಿತರಾಗಿದ್ದಾರೆ. ಅಫ್ಘಾನಿಸ್ತಾನದಲ್ಲಿ ಮೆರಿಟ್ ಪಡೆದು ಹೆಚ್ಚಿನ ವ್ಯಾಸಂಗಕ್ಕಾಗಿ ಬಂದಿರುವ ಇವರು, ಇದೀಗ ತಮ್ಮ ದೇಶಕ್ಕೆ ಎದುರಾಗಿರುವ ವಿಷಮ ಪರಿಸ್ಥಿತಿ ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಅಧ್ಯಯನ ಬಿಟ್ಟು ತಮ್ಮ ಕುಟುಂಬದ ಸದಸ್ಯರ ಬಗ್ಗೆ ಇವರು ಚಿಂತೆ ಮಾಡುವಂತಾಗಿದೆ.
ಕುಟುಂಬಸ್ಥರು ಸುರಕ್ಷಿತ..
ಕೆಲವರು ತಮ್ಮ ತಮ್ಮ ಕುಟುಂಬ ಸದಸ್ಯರ ಜೊತೆ ಮಾತನಾಡಿದ್ದು, ಮಾಧ್ಯಮದಲ್ಲಿ ವೀಕ್ಷಿಸಿರುವ ಪ್ರಕಾರ ನಮ್ಮ ಕುಟುಂಬದವರು ಸುರಕ್ಷಿತವಾಗಿದ್ದಾರೆ. ಅವರಿಗೆ ಅಗತ್ಯ ವಸ್ತುಗಳು ದೊರೆಯುತ್ತಿವೆ. ಹೀಗಾಗಿ ಕುಟುಂಬದವರು ಸುರಕ್ಷಿತವಾಗಿದ್ದಾರೆ ಎಂದು 'ಈಟಿವಿ ಭಾರತ'ದೊಂದಿಗೆ ಕೆಲ ವಿಚಾರಗಳನ್ನು ಹಂಚಿಕೊಂಡರು.
ಭಾರತದಲ್ಲೇ ಉಳಿದುಕೊಳ್ಳುವ ಇಚ್ಛೆ..
ಕೆಲ ವಿದ್ಯಾರ್ಥಿಗಳ ಕೋರ್ಸ್ ಎರಡು ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ. ಹೀಗಾಗಿ ವೀಸಾ ಅವಧಿ ಮುಗಿದ ಮೇಲೂ ಅದೇ ವೀಸಾ ಮುಂದುವರೆಸಿಕೊಂಡು ಇಲ್ಲೇ ಉಳಿಯುತ್ತೇವೆ ಎನ್ನುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿ ಕುಟುಂಬ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ತಮಗೆ ಬಂದ ವಿದ್ಯಾರ್ಥಿ ವೇತನದಲ್ಲಿ ಜೀವನ ಸಾಗಿಸುವ ಪರಿಸ್ಥಿತಿ ಎದುರಾಗಿದೆ. ಆದ್ರೆ ಮುಂದಿನ ಭವಿಷ್ಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆತಂಕ ಮನೆ ಮಾಡಿರುವುದಂತು ಸ್ಪಷ್ಟವಾಗಿದೆ.
ಆ. 15ರಂದು ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ಗೆ ನುಗ್ಗುವ ಮೂಲಕ ತಾಲಿಬಾನ್ ಉಗ್ರರು ತಮ್ಮ ಅಧಿಪತ್ಯ ಸಾಧಿಸಿದರು. ಆ. 14 ರಂದು ಅಧ್ಯಕ್ಷ ಅಶ್ರಫ್ ಘನಿ ತಾಲಿಬಾನ್ ಉಗ್ರರ ಉಪಟಳಕ್ಕೆ ಬೇಸತ್ತು ದೇಶದಿಂದ ರಾತ್ರೋರಾತ್ರಿ ಪಲಾಯನ ಮಾಡಿದರು.