ಹುಬ್ಬಳ್ಳಿ:ಭಾರತೀಯ ಮೂಲದ ದಂಪತಿ ದೌರ್ಜನ್ಯ ಎಸಗುತ್ತಿದ್ದಾರೆ ಎಂಬ ಕಾರಣ ನೀಡಿ ಜರ್ಮನಿಯ ಅಧಿಕಾರಿಗಳು ಅವರ ಏಳು ವರ್ಷದ ಮಗುವನ್ನು ವಶದಲ್ಲಿಟ್ಟುಕೊಂಡಿದ್ದಾರೆ. ಅಲ್ಲಿನ ಸರ್ಕಾರ ದಂಪತಿ ಮೇಲಿನ ಆರೋಪವನ್ನು ತೆರೆವುಗೊಳಿಸಿದ್ದರೂ ಸಹ ಇನ್ನೂ ಮಗುವನ್ನು ಪೋಷಕರ ವಶಕ್ಕೆ ನೀಡಿಲ್ಲ ಎಂದು ಜೈನ್ ಸಮುದಾಯ ಆರೋಪಿಸಿದೆ. ಈ ದಿಸೆಯಲ್ಲಿ ಅರಿಹಾ ಬಿಡುಗಡೆಗೆ ಒತ್ತಾಯಿಸಿ ಜೈನ್ ಸಮುದಾಯ ಹುಬ್ಬಳ್ಳಿಯಲ್ಲಿ ಬೃಹತ್ ರ್‍ಯಾಲಿ ನಡೆಸಿತು.
ಮುಂಬೈ ಮೂಲದ ಭವೇಶ್ ಷಾ ಎಂಬುವವರು ಜರ್ಮನಿಯ ಘಾಟ್ಲೋಡಿಯಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಧಾರಾ ಎಂಬುವವರನ್ನು ವಿವಾಹವಾಗಿದ್ದಾರೆ. ಸಾಫ್ಟವೇರ್ ಇಂಜಿನಿಯರ್ ಆಗಿರುವ ಅವರು ಬರ್ಲಿನ್ನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರಿಗೆ ಅರಿಹಾ ಎಂಬ ಹೆಣ್ಣು ಮಗು ಜನಿಸಿತ್ತು.
ಈ ಮಗುವಿಗೆ ಏಳು ತಿಂಗಳು ಇರುವಾಗ ಆರೋಗ್ಯ ಸಮಸ್ಯೆ ಉಂಟಾಗಿತ್ತು. ಆಗ ಜರ್ಮನಿಯ ವೈದ್ಯರಲ್ಲಿ ತೋರಿಸಿದಾಗ ಮಗುವಿಗೆ ಯಾವುದೇ ಸಮಸ್ಯೆಯಿಲ್ಲ ಎಂದು ಕಳುಹಿಸಿದ್ದರು. ಇದಾದ ಎರಡು ದಿನಕ್ಕೆ ವೈದ್ಯರು ಜರ್ಮನಿಯ ಅಧಿಕಾರಿಗಳನ್ನು ಕರೆಸಿ ಮಗುವನ್ನು ಪರಿಶೀಲಿಸಿ ದಂಪತಿಗಳ ಮೇಲೆ ದೌರ್ಜನ್ಯದ ಆರೋಪ ಹೊರಿಸಿ ದಂಪತಿಗಳಿಂದ ಮಗುವನ್ನು ಬೇರೆ ಮಾಡಿದರು.
ನಂತರ ಮಗು ಅರಿಹಾಗಾಗಿ ದಂಪತಿಗಳು ನಿರಂತರವಾಗಿ ಕಾನೂನು ಹೋರಾಟ ನಡೆಸಿದ್ದಾರೆ. ಇದೀಗ ಅಲ್ಲಿನ ಸರ್ಕಾರ ದಂಪತಿಗಳ ಮೇಲಿನ ಆರೋಪವನ್ನು ತೆರೆವುಗೊಳಿಸಿದೆ. ಆದರೆ, ಮಗುವನ್ನು ಮಾತ್ರ ದಂಪತಿಗಳಿಗೆ ಒಪ್ಪಿಸುವ ಕೆಲಸವನ್ನು ಅಲ್ಲಿನ ಅಧಿಕಾರಿಗಳು ಮಾಡುತ್ತಿಲ್ಲ.