ಧಾರವಾಡ: ಭಾರಿ ಮಳೆಗೆ ಜಿಲ್ಲೆಯಲ್ಲಿ ಈರುಳ್ಳಿ, ಮೆಣಸಿಕಾಯಿ, ಆಲೂಗಡ್ಡೆ ಬೆಳೆಗಳಿಗೆ ಹಾನಿಯಾಗಿದ್ದು ರೈತರು ಕಂಗಾಲಾಗಿದ್ದಾರೆ.
ಸೆಪ್ಟೆಂಬರ್ನಲ್ಲಿ ಸುರಿದ ಅಲ್ಪ ಮಳೆಯಿಂದ ಉತ್ತಮ ಬೆಳೆ ಬರುತ್ತೆ ಎಂದು ಖುಷಿಯಲ್ಲಿದ್ದ ರೈತರಿಗೆ ಅಕ್ಟೋಬರ್ನಲ್ಲಿ ಸುರಿದ ಮಳೆ ಭಾರಿ ಹೊಡೆತ ಕೊಟ್ಟಿದೆ. ಉತ್ತಮ ಫಸಲು ತೆಗೆದು ಮಾರುಕಟ್ಟೆಗೆ ಸಾಗಿಸಬೇಕೆಂದಿದ್ದವರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂಬಂತಾಗಿದೆ. ಭಾರಿ ಮಳೆಗೆ ಆಲೂಗಡ್ಡೆ ಕೊಳೆತು ನಾರುತ್ತಿದ್ದು, ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ಬೆಳೆ ಹಾನಿಗೆ ಸೂಕ್ತ ಪರಿಹಾರಕ್ಕೆ ರೈತರ ಆಗ್ರಹ ಜಿಲ್ಲೆಯಲ್ಲಿ ಬೆಳೆಗಳ ಬಿತ್ತನೆ ಪ್ರಮಾಣ:
ಈರುಳ್ಳಿ: 28,509 ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ, ಮಳೆಯಿಂದ 15,022 ಹೆಕ್ಟೇರ್ ಪ್ರದೇಶದ ಬೆಳೆಹಾನಿ
ಮೆಣಸಿನಕಾಯಿ: 28,000 ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ, ಮಳೆಯಿಂದ 8950 ಹೆಕ್ಟೇರ್ ಪ್ರದೇಶದ ಬೆಳೆ ಹಾನಿ
ಆಲೂಗಡ್ಡೆ: 1,136 ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ, 890 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ
ಜಿಲ್ಲೆಯಲ್ಲಿ ರೈತರು ದುಬಾರಿ ಬೆಲೆಯಲ್ಲಿ ಬಿತ್ತನೆ ಬೀಜ ಖರೀದಿಸಿ, ಬಿತ್ತನೆ ಮಾಡಿದ್ದರು. ನಿರಂತರ ಮಳೆಯಿಂದ ಜಮೀನಿನಲ್ಲಿ ತೇವಾಂಶ ಹೆಚ್ಚಾಗಿದ್ದರಿಂದ ದೊಡ್ಡ ಪ್ರಮಾಣದಲ್ಲಿ ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ. ಅಧಿಕಾರಿಗಳು ಹಾನಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕೊಡಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ.