ಹುಬ್ಬಳ್ಳಿ:ಕೈ ಮುಗಿದು ಬೇಡಿಕೊಳ್ಳುವೆ ಮತ್ತೆ ಎದ್ದು ಬಾ ಅಮ್ಮ ಎನ್ನುವ ಮುಗ್ಧ ಮನದ ಆಕ್ರಂದನ. ಬದುಕಿದ್ದಾಗ ಮಗಳು ಹಾಗೂ ಆಕೆಯ ಕುಟುಂಬದ ಎದುರು ಹಗೆ ತೋರಿಸಿ ಸತ್ತಾಗ ಮಗಳ ಮೃತದೇಹದ ಮುಂದೆ ಕಣ್ಣೀರು ಹಾಕುತ್ತಿರುವ ಹೆತ್ತವರು. ಒಂದು ಕಡೆ ಅಣ್ಣ ಹೋದ ಮತ್ತೊಂದು ಕಡೆ ಅತ್ತಿಗೆಯೂ ಹೋದರು ಯಾರಿಗೆ ದುಃಖ ಹೇಳಿಕೊಳ್ಳಲಿ ಎಂಬ ಅಸಹಾಯಕ ಸ್ಥಿತಿಯಲ್ಲಿ ನಿಂತಿರುವ ತಮ್ಮ. ಹೌದು, ಇಂತಹ ಮನಕಲಕುವ ದೃಶ್ಯ ಕಿಮ್ಸ್ ಶವಗಾರದ ಮುಂದೆ ನಡೆದಿದ್ದು, ಎಲ್ಲರ ಕಣ್ಣಂಚನ್ನು ಒದ್ದೆ ಮಾಡಿತ್ತು.
ಜುಲೈ 4ರಂದು ದೀಪಕ್ ಪಟದಾರಿ ಹತ್ಯೆ: ಗಂಗಿವಾಳ ಗ್ರಾಮ ಪಂಚಾಯಿತಿ ಸದಸ್ಯ ದೀಪಕ್ ಪಟಾದರಿ ಪತ್ನಿ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಕಳೆದ ಜುಲೈ 4ರಂದು ದೀಪಕ್ ಪಟದಾರಿಯನ್ನು ರಾಯನಾಳ ಗ್ರಾಮದ ನಡುರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಕೊಲೆಯ ಹಿಂದೆ ಪುಷ್ಪಾ ತವರು ಮನೆಯವರ ಕೈವಾಡ ಇದೆ ಎಂಬುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.
ವಿರೋಧದ ನಡುವೆಯೂ ಮದುವೆ: ಬಿಜೆಪಿ ಕಾರ್ಯಕರ್ತ ಮತ್ತು ಗಂಗಿವಾಳ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ದೀಪಕ್ ಪಟದಾರಿ ರಾಯನಾಳ ಗ್ರಾಮದ ಪ್ರತಿಷ್ಠಿತ ಮೇಟಿ ಕುಟುಂಬದ ಮಗಳು ಪುಷ್ಪಾರನ್ನು ವಿರೋಧದ ನಡುವೆಯೂ ನಾಲ್ಕು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ದೀಪಕ್ ಮತ್ತು ಪುಷ್ಪಾಳಿಗೆ ಎರಡು ಮಕ್ಕಳು ಸಹ ಜನಿಸಿವೆ. ಮತ್ತೊಂದು ಕಡೆ ರಾಜಕೀಯವಾಗಿ ಪ್ರಬಲವಾಗಿ ಬೆಳೆಯುತ್ತಿದ್ದ ದೀಪಕ್, ತನ್ನ ಮಾವನ ಕುಟುಂಬ ಬೆಂಬಲಿತ ಗ್ರಾಮ ಪಂಚಾಯಿತಿ ಅಧ್ಯಕ್ಷೆಯ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದ.
ದೀಪಕ್ ಮೇಲೆ ಮೊದಲೇ ಕೋಪಗೊಂಡಿದ್ದ ಪುಷ್ಪಾ ತವರು ಮನೆಯವರು, ಆತನ ಏಳಿಗೆಯನ್ನು ಸಹಿಸಲಾರದೇ ಕೊಲೆ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ. ದೀಪಕ್ ಹತ್ಯೆಗೆ ಯಲ್ಲಪ್ಪ ಶಂಕ್ರಪ್ಪ ಮೇಟಿ, ರುದ್ರಪ್ಪ ಶಂಕ್ರಪ್ಪ ಮೇಟಿ, ನಾಗರಾಜ ಮಲ್ಲಪ್ಪ ಹೆಗ್ಗಣ್ಣವರ, ಪ್ರವೀಣ್ ಮುದಲಿಂಗಣ್ಣವರ, ಚಂದ್ರಶೇಖರ ಮುದಲಮಗಣ್ಣವರ, ಮಲ್ಲಿಕಾರ್ಜುನ ಶಂಕ್ರಪ್ಪ ಮೇಟಿ, ಶಿವಪ್ಪ ರೇವಣಪ್ಪ ಮೇಟಿ, ಪರಶುರಾಮ ಬಸಪ್ಪ ಮೇಟಿ, ಯಲ್ಲಪ್ಪ ಬಸಪ್ಪ ಮೇಟಿಎಂಬುವವರೇ ಕಾರಣ ಎಂದು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.