ಹುಬ್ಬಳ್ಳಿ:ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರಿಂದು ಹುಬ್ಬಳ್ಳಿಗೆ ಆಗಮಿಸಿ ಬೃಹತ್ ರೋಡ್ ಶೋ ನಡೆಸಿದರು.
ಬೆಳಗ್ಗೆ ನಗರಕ್ಕೆ ಆಗಮಿಸಿದ್ದ ಭಗವಂತ್ ಮಾನ್ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಜೊತೆ ಸಭೆ ನಡೆಸಿದರು. ಬಳಿಕ ದೇಶಪಾಂಡೆ ನಗರದಲ್ಲಿರುವ ಗುರುದ್ವಾರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ, ನಂತರ ಸಿದ್ದಾರೂಢ ಮಠಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಹಳೇ ಹುಬ್ಬಳ್ಳಿಯ ಪತೇಶಾವಲಿ ದರ್ಗಾಕ್ಕೆ ಭೇಟಿ ಪ್ರಾರ್ಥನೆ ಸಲ್ಲಿಸಿದರು.
ಸಂಜೆ ಪಶ್ಚಿಮ ಕ್ಷೇತ್ರದ ಅಭ್ಯರ್ಥಿ ಎಂ.ಅರವಿಂದ್, ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ ವಿಕಾಸ್ ಸೊಪ್ಪಿನ ಮತ್ತು ಪೂರ್ವ ಕ್ಷೇತ್ರದ ಅಭ್ಯರ್ಥಿ ಬಸವರಾಜ್ ತೇರದಾಳ ಪರ ಇಂಡಿ ಪಂಪ್ ಸರ್ಕಲ್ನಿಂದ ಹಳೇ ಹುಬ್ಬಳ್ಳಿಯವರೆಗೂ ರೋಡ್ ಶೋ ನಡೆಸಿ ಬಳಿಕ ಮಾತನಾಡಿ, ಜನ ಬೆಂಬಲ ಕಂಡು ನನಗೆ ತುಂಬಾ ಸಂತೋಷವಾಗಿದೆ. ಪಂಜಾಬ್ ಹಾಗೂ ದೆಹಲಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ನಿಮ್ಮ ಮುಂದೆ ಇವೆ. ಇದೇ ಮಾದರಿ ಸರ್ಕಾರ ರಚನೆ ಮಾಡಬೇಕು ಅಂದ್ರೆ ಆಮ್ ಆದ್ಮಿ ಪಕ್ಷ ಬೆಂಬಲಿಸುವಂತೆ ಮನವಿ ಮಾಡಿದರು.
ನಾಳೆ ಅಥಣಿಗೆ ಪಂಜಾಬ್ ಸಿಎಂ ಭೇಟಿ: ಭಗವಂತ ಮಾನ್ ಅವರು ನಾಳೆ ಅಥಣಿಗೆ ಭೇಟಿ ನೀಡಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಭಾಗವಹಿಸಲಿದ್ದಾರೆ. ಈ ಬಗ್ಗೆ ಮಾತನಾಡಿದ ಆಪ್ ಅಭ್ಯರ್ಥಿ ಸಂಪತ್ ಕುಮಾರ ಶೆಟ್ಟಿ, ಭ್ರಷ್ಟಾಚಾರ ಮುಕ್ತ ಸ್ವಚ್ಚ ಸರ್ಕಾರದ ಆಡಳಿತ ರಾಜ್ಯದಲ್ಲಿ ಅವಶ್ಯಕತೆ ಇದೆ ಹೀಗಾಗಿ ಆಮ್ ಆದ್ಮಿ ಪಕ್ಷಕ್ಕೆ ಜನರ ಒಲವು ಇದೆ. ಸಿಎಂ ಭಗವಂತ ಮಾನ್ ಅವರು ಬುಧವಾರ ಪಟ್ಟಣಕ್ಕೆ ಆಗಮಿಸಿ ನಾಮಪತ್ರ ಸಲ್ಲಿಕೆಯಲ್ಲಿ ಪಾಲ್ಗೊಳ್ಳುವರು ಎಂದರು.
ರಾಜ್ಯದಲ್ಲಿ ಪಾರದರ್ಶಕ ಆಡಳಿತದ ಅವಶ್ಯಕತೆ ಇದೆ, ದುರಾಡಳಿತ ತೊಲಗಬೇಕು, ಎಲ್ಲ ಜನರು ಸುಖ, ಸಮೃದ್ಧಿಯಿಂದ ಬದುಕುವ ವಾತಾವರಣ ನಿರ್ಮಾಣವಾಗಬೇಕು, ಸರ್ಕಾರದ ಸೌಲಭ್ಯಗಳು ಎಲ್ಲ ಜನರಿಗೆ ಸಿಗಬೇಕಾದರೆ ಆಮ್ ಆದ್ಮಿ ಪಕ್ಷವನ್ನು ಜನರು ಬೆಂಬಲಿಸಬೇಕು. ನಾಮಪತ್ರ ಸಲ್ಲಿಕೆ ದಿನದಂದು ಹೆಚ್ಚಿನ ಕಾರ್ಯಕರ್ತರು, ಸಾರ್ವಜನಿಕರು ಪಾಲ್ಗೊಳಬೇಕು ಎಂದು ಮನವಿ ಮಾಡಿದರು.
ನಂತರ ಆಮ್ ಆದ್ಮಿ ಪಕ್ಷದ ಮುಖಂಡ ವಿನಾಯಕ ದೇಸಾಯಿ ಮಾತನಾಡಿ, ಪ್ರಥಮ ಬಾರಿಗೆ ಪಂಜಾಬ್ ಮುಖ್ಯಮಂತ್ರಿ ಮತ್ತು ಪಕ್ಷದ ಹಿರಿಯ ಮುಖಂಡರು ಅಥಣಿ ಪಟ್ಟಣಕ್ಕೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಬುಧವಾರ 10 ಗಂಟೆಗೆ ಶಿವಾಜಿ ವೃತ್ತದ ಮೂಲಕ ಬಸವೇಶ್ವರ ವೃತ್ತ, ಶಿವಯೋಗಿ ವೃತ್ತ, ಅಂಬೇಡ್ಕರ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಬೃಹತ್ ರೋಡ್ ಶೋ ನಡೆಯಲಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರನ್ನು, ರೈತರನ್ನು ಉದ್ದೇಶಿಸಿ ಭಗವಂತ ಮಾನ್ ಮಾತನಾಡಲಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ:ಕೈ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಹುಬ್ಬಳ್ಳಿ ಧಾರವಾಡದಿಂದ ಶೆಟ್ಟರ್, ಸಿಎಂ ಬೊಮ್ಮಾಯಿ ವಿರುದ್ಧ ಮೊಹಮ್ಮದ್ ಸವಣೂರು ಕಣಕ್ಕೆ