ಧಾರವಾಡ: ಜಿಲ್ಲೆಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಇಂದು ಬೆಳಗ್ಗೆ ಚಾಲನೆ ದೊರೆಯಿತು.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸುಶೀಲಾ ಬಿ. ಅವರು ಬೆಳಗ್ಗೆ ನಗರದ ಹಳೆ ಬಸ್ನಿಲ್ದಾಣದ ಹತ್ತಿರವಿರುವ ಪಾಲಿಕೆಯ ಆಸ್ಪತ್ರೆಯಲ್ಲಿ ಪೋಲಿಯೊ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ 900 ಬೂತ್ (ಕೇಂದ್ರ)ಗಳಲ್ಲಿ ನವಜಾತ ಶಿಶುಗಳು ಸೇರಿದಂತೆ 5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ಹಾಕಲಾಗುವುದು. ಫೆಬ್ರವರಿ 1 ರಿಂದ 3 ರ ವರೆಗೆ ಮನೆ ಮನೆಗೆ ತೆರಳಿ ಲಸಿಕೆ ನೀಡಲಾಗುವುದು ಎಂದರು.
ನಗರ ಪ್ರದೇಶದಲ್ಲಿನ 132319, ಗ್ರಾಮೀಣ ಪ್ರದೇಶದಲ್ಲಿನ 79421 ಮಕ್ಕಳು ಸೇರಿ ಐದು ವರ್ಷದೊಳಗಿನ ಒಟ್ಟು 211740 ಮಕ್ಕಳಿಗೆ ಲಸಿಕೆ ಹಾಕಲು ಗುರುತಿಸಲಾಗಿದೆ. ಫೆಬ್ರವರಿ 1 ರಿಂದ 3 ರವರೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರು ಜಿಲ್ಲೆಯ 415675 ಮನೆಗಳಿಗೆ ತೆರಳಿ ಮಕ್ಕಳಿಗೆ ಲಸಿಕೆ ಹಾಕಲಿದ್ದಾರೆ. ಮನೆ ಮನೆಗೆ ತೆರಳಿ ಲಸಿಕೆ ಹಾಕಲು 1785 ತಂಡಗಳನ್ನು ರಚಿಸಲಾಗಿದೆ. ಈ ರಾಷ್ಟ್ರೀಯ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸಲು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯೊಂದಿಗೆ ಜಿಲ್ಲೆಯ ಸಂಘ ಸಂಸ್ಥೆಗಳು ಕೈಜೋಡಿಸಿ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿಕೊಂಡರು.
ಇದನ್ನೂ ಓದಿ:ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಶಶಿಕಲಾ: ಘೋಷಣೆ ಕೂಗಿ ಅಭಿಮಾನಿಗಳಿಂದ ಸ್ವಾಗತ