ಪಿಎಸ್ಐ ನೇಮಕಾತಿ ಹಗರಣದ ಕುರಿತು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿಕೆ ಧಾರವಾಡ :ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್ಐ) ನೇಮಕಾತಿ ಹಗರಣ ವಿಚಾರದ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ. ಹಿರಿಯ ಪೊಲೀಸ್ ಅಧಿಕಾರಿಗಳೇ ಬಂಧಿತರಾಗಿದ್ದಾರೆ. ಹಗರಣದಲ್ಲಿ ಸಿಲುಕಿರದವರೂ ಇದ್ದಾರೆ. ಅವರಿಗಾಗಿ ಪುನರ್ ಪರೀಕ್ಷೆಗೆ ಸರ್ಕಾರ ತೀರ್ಮಾನ ಮಾಡಿತ್ತು. ಆದರೆ, ಪುನರ್ ಪರೀಕ್ಷೆ ವಿರುದ್ಧವೂ ಕೆಲವರು ಕೋರ್ಟ್‌ಗೆ ಹೋಗಿದ್ದಾರೆ. ಹೀಗಾಗಿ ಕೋರ್ಟ್ ನಿರ್ದೇಶನಕ್ಕಾಗಿ ಕಾಯಬೇಕಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿಂದು ಮಾತನಾಡಿದ ಅವರು, ಪುನರ್ ಪರೀಕ್ಷೆ ಮಾಡುತ್ತೀರಾ, ಬೇರೆ ರೀತಿ ಮಾಡುತ್ತೀರಾ ಅಂತಾ ಕೋರ್ಟ್ ಕೇಳಿತ್ತು. ನಾವು ಪುನರ್ ಪರೀಕ್ಷೆ ಮಾಡುತ್ತೇವೆ ಎಂದು ಹೇಳಿದ್ದೇವೆ. ಅದನ್ನು ಕೋರ್ಟ್ ಮಾನ್ಯ ಮಾಡುತ್ತಾ ಅಂತಾ ಕಾಯುತ್ತಿದ್ದೇವೆ. ಕೋರ್ಟ್ ನಿರ್ದೇಶನದಂತೆ ಮುನ್ನಡೆಯುತ್ತೇವೆ. ಸದ್ಯ 545ರ ನೇಮಕಾತಿಯ ಹಗರಣ ಇತ್ಯರ್ಥ ಆಗಬೇಕಿದೆ. ಆ ಬಳಿಕವೇ ಹೊಸ 400 ನೇಮಕಾತಿಯ ಪರೀಕ್ಷೆ ನಡೆಸುವ ಚಿಂತನೆ ಮಾಡುತ್ತೇವೆ. ಹಿಂದಿನ ಹಗರಣ ಮೊದಲು ಇತ್ಯರ್ಥ ಆಗಲಿ. ಆ ಬಳಿಕ ಹೊಸ ನೇಮಕಾತಿಯ ಪರೀಕ್ಷೆ ನಡೆಸುತ್ತೇವೆ ಎಂದು ಸಚಿವರು ಉತ್ತರಿಸಿದರು.
ಧಾರವಾಡ ಜಿಲ್ಲೆಯ ಪೊಲೀಸ್ ಕಾರ್ಯವೈಖರಿ ಪರಿಶೀಲನೆ ಮಾಡಿದ್ದೇನೆ. ಜಿಲ್ಲೆಯಲ್ಲಿ ಅನೇಕ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಅಧಿಕಾರಿಗಳು ವಿವರ ಕೊಟ್ಟಿದ್ದಾರೆ. ಅನೇಕ ವಿಚಾರಗಳನ್ನು ಮಾಧ್ಯಮಗಳಿಗೆ ಹೇಳಲು ಆಗುವುದಿಲ್ಲ. ಅವೆಲ್ಲವೂ ರಹಸ್ಯವಾಗಿ ಇರುವಂತವು. ಕ್ರಿಮಿನಲ್ ಮತ್ತು ಇತರೆ ಚಟುವಟಿಕೆಗಳ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಧಾರವಾಡ ಜಿಲ್ಲೆ ಆ ಚಟುವಟಿಕೆಗಳಲ್ಲಿ ಕಡಿಮೆ ಇದೆ ಎಂದರು.
ಯಾವ ಯಾವ ಕೇಸ್‌ಗಳನ್ನು ಅನಾವಶ್ಯಕವಾಗಿ ಅಮಾಯಕರ ಮೇಲೆ ಹಾಕಲಾಗಿದೆ, ವಿದ್ಯಾರ್ಥಿಗಳ, ರೈತರ ಹಾಗೂ ಹೋರಾಟಗಾರರ ಮೇಲಿರುವ ಕೇಸ್‌ಗಳೇನು ಎಂಬುದರ ಬಗ್ಗೆ ಸ್ಥಳೀಯ ಶಾಸಕರಿಗೆ ಅರ್ಜಿ ಕೊಡುತ್ತಾರೆ. ಶಾಸಕರು ಪರಿಶೀಲನೆ ಮಾಡುವಂತೆ ನಮಗೆ ಪತ್ರ ಬರೆಯುತ್ತಾರೆ. ನಾವು ಇಲಾಖೆಗೆ ಇದನ್ನು ಬರೆದ ಮೇಲೆ ಇಲಾಖೆ ಕ್ಯಾಬಿನೆಟ್ ಸಬ್ ಕಮಿಟಿ ಎದುರು ಇದನ್ನು ಇಡಬೇಕು. ಸಬ್ ಕಮಿಟಿ ಕೇಸ್ ವಾಪಸ್ ತಗೋಬೇಕೋ ಬೇಡವೋ ಎಂದು ತೀರ್ಮಾನ ಮಾಡಲಿದೆ. ಸಬ್ ಕಮಿಟಿ ತೀರ್ಮಾನ ಮೇಲೆ ಕ್ಯಾಬಿನೆಟ್ ಕಡೆ ಅದು ಬರಬೇಕು. ಕ್ಯಾಬಿನೆಟ್ ಸ್ವೀಕಾರ ಮಾಡಿದರೆ ಮಾತ್ರ ಕೇಸ್ ವಾಪಸ್ ಆಗಲಿದೆ. ಸದ್ಯ ಹುಬ್ಬಳ್ಳಿ ಕೇಸ್ ಕೋರ್ಟ್ನಲ್ಲಿ ಇದೆ. ಯಾರೋ ಸುಮ್ಮನೆ ಕೇಸ್ ವಾಪಸ್ ಆಗಿವೆ ಎಂದು ಹೇಳಿದರೆ, ನಡೆಯಲ್ಲ ಎಂದು ಸ್ಪಷ್ಟಪಡಿಸಿದರು.
ಡ್ರಗ್ಸ್‌ಗೆ ಕಡಿವಾಣ ವಿಚಾರವಾಗಿ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆ ಡ್ರಗ್ಸ್‌ಗೆ ಕಡಿವಾಣ ಹಾಕಬೇಕಿದೆ: ಇಡೀ ರಾಜ್ಯದಲ್ಲಿ ಡ್ರಗ್ಸ್ ಮೇಲೆ ಯುದ್ಧವನ್ನೇ ಸಾರಿದ್ದೇವೆ. ಏನಾದರೂ ಮಾಡಿ ನಿಲ್ಲಿಸಲೇಬೇಕು ಅಂತಾ ನಿರ್ಧರಿಸಿದ್ದೇವೆ. ಡ್ರಗ್ಸ್ ಹತ್ತಿಕ್ಕಲು ಪ್ರಯತ್ನ ನಡೆದಿದೆ. ಧಾರವಾಡ ಜಿಲ್ಲೆಯಲ್ಲಿ ಡ್ರಗ್ಸ್ ಉಪಯೋಗ, ಪೆಡ್ಲರ್‌ಗಳ ಸಂಖ್ಯೆ ಕಡಿಮೆ ಇದೆ. ಆದರೆ, ಎಸ್ಪಿಗೆ ಆರು ತಿಂಗಳ ಗಡುವು ನೀಡಿದ್ದೇನೆ. ಅಷ್ಟರೊಳಗೆ ಈಗ ಇರುವ ಡ್ರಗ್ಸ್ ಚಟುವಟಿಕೆ ಸಂಪೂರ್ಣ ತಡೆಯಬೇಕು ಅಂತಾ ಸೂಚಿಸಿದ್ದೇನೆ. ಸೈಬರ್ ಕ್ರೈಂ ಕೇಸ್‌ಗಳು ನಡೆಯುತ್ತಿವೆ. ಅವಹೇಳನಕಾರಿ, ಸಮಾಜದ ವಿರುದ್ಧ, ಶಾಂತಿ ಕದಡುವ ಪೋಸ್ಟ್ ಮಾಡುವವರ ಮೇಲೆ ಕ್ರಮಕ್ಕೆ ಸೂಚಿಸಿದ್ದೇನೆ. ಫೇಕ್‌ನ್ಯೂಸ್ ಹರಡುವವರು, ಬ್ಯಾಂಕ್ ಅಕೌಂಟ್ ಪಡೆದು ವಂಚಿಸುವವರ ಮೇಲೆ ಕ್ರಮಕ್ಕೆ ಸೂಚಿಸಿದ್ದೇನೆ ಎಂದು ಸಚಿವರು ಹೇಳಿದ್ದಾರೆ.
ಇದನ್ನೂ ಓದಿ:Sudham Das: ಪರಿಷತ್‌ಗೆ ಸುಧಾಮ್ ದಾಸ್ ನಾಮನಿರ್ದೇಶನ; ನಾಲ್ವರು ಸಚಿವರ ವಿರೋಧ, ಖರ್ಗೆಗೆ ಪತ್ರ