ಹುಬ್ಬಳ್ಳಿ: ಕರ್ತವ್ಯ ನಿರತ ಪಾಲಿಕೆಯ ಕಂದಾಯ ಅಧಿಕಾರಿಯ ಮೇಲೆ ಪೊಲೀಸರು ಮನ ಬಂದಂತೆ ಥಳಿಸಿರುವ ಆರೋಪ ಕೇಳಿ ಬಂದಿದೆ. ಹೆಗ್ಗೇರಿ ಕ್ರಾಸ್ ಬಳಿ ಇಂದು ಬೆಳಗ್ಗೆ ಹು-ಧಾ ಮಹಾನಗರ ಪಾಲಿಕೆ ವಲಯ ಕಚೇರಿ-9ರ ಸಹಾಯಕ ಕಂದಾಯ ಅಧಿಕಾರಿ ಎನ್.ಕೆ. ಅಂಗಡಿ ಅವರನ್ನು ತಡೆದು, ಪೊಲೀಸರು ಹಿಗ್ಗಾಮುಗ್ಗ ಥಳಿಸಿದ್ದಾರೆಂದು ಆರೋಪಿಸಲಾಗಿದೆ.
ಕರ್ತವ್ಯನಿರತ ಪಾಲಿಕೆ ಕಂದಾಯ ಅಧಿಕಾರಿ ಮೇಲೆ ಪಿಎಸ್ಐ ಹಲ್ಲೆ..? - ಹು-ಧಾ ಮಹಾನಗರ ಪಾಲಿಕೆಯ ಕಂದಾಯ ಅಧಿಕಾರಿ ಮೇಲೆ ಹಲ್ಲೆ
ಹು-ಧಾ ಮಹಾನಗರ ಪಾಲಿಕೆಯ ಕಂದಾಯ ಅಧಿಕಾರಿಯ ಮೇಲೆ, ಹಳೇ ಹುಬ್ಬಳ್ಳಿಯ ಇಂಡಿಪಂಪ್ ಪೊಲೀಸ್ ಠಾಣಾ ಪಿಎಸ್ಐ ಸುಖಾನಂದ ಬಿ.ಎಸ್. ಎಂಬುವವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಹಳೇ ಹುಬ್ಬಳ್ಳಿಯ ಇಂಡಿಪಂಪ್ ಪೊಲೀಸ್ ಠಾಣಾ ಪಿಎಸ್ಐ ಸುಖಾನಂದ ಬಿ.ಎಸ್. ಎಂಬುವವರು ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಇಂದು ಮುಂಜಾನೆ ಹಾಲು ವಿತರಣೆ ಕಾರ್ಯಕ್ಕಾಗಿ ತೆರಳುತ್ತಿದ್ದ ಸಂದರ್ಭದಲ್ಲಿ ಪಿಎಸ್ಐ, ಅಮಾನವೀಯ ವರ್ತನೆ ತೋರಿಸಿದ್ದಾರೆ ಎಂದು ಎನ್.ಕೆ. ಅಂಗಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರ ಈ ದುರ್ವರ್ತನೆಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ನೌಕರರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ತಪ್ಪಿತಸ್ಥ ಪೊಲೀಸ್ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ನಮ್ಮ ಕೆಲಸ ಕಾರ್ಯ ಸ್ಥಗಿತಗೊಳಿಸಿ, ನಾವು ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ. ಹು-ಧಾ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ನೌಕರರು ಮಹಾನಗರ ಪಾಲಿಕೆ ಆಯುಕ್ತರ ಕಚೇರಿ ಎದುರು ಜಮಾಯಿಸಿದ್ದು, ಪ್ರತಿಭಟನೆ ನಡೆಸಿದರು.