ಧಾರವಾಡ:ನಿರಂತರ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡುವಲ್ಲಿ ಸರ್ಕಾರ ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರರವರು ನೆರೆಯಿಂದ ಹಾನಿಯಾದ ಮನೆಯಲ್ಲಿ ವಾಸ್ತವ್ಯ ಮಾಡಿ ಪ್ರತಿಭಟಿಸಿದ್ದಾರೆ.
ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಮಣಿರಾಮ್ ತೇಲಿ ಎಂಬುವವರ ಮನೆ ನೆರೆಯಿಂದ ಹಾಳಾಗಿತ್ತು. ಇದೀಗ ಬಸವರಾಜ ಕೊರವರ, ನಾಗರಾಜ ಕಿರಣಗಿ ಹಾಗೂ ರೈತ ಮುಖಂಡ ಅರಳಾಪುರ ಮಂಜೇಗೌಡರು ಈ ಮನೆಯಲ್ಲಿ ರಾತ್ರಿ ವಾಸ್ತವ್ಯ ಮಾಡಿ ಪ್ರತಿಭಟಿಸಿ ಆಗಿರುವ ತಾರತಮ್ಯವನ್ನು ಸರ್ಕಾರಕ್ಕೆ ಮುಟ್ಟಿಸುವ ಕೆಲಸವನ್ನು ವಿಭಿನ್ನವಾಗಿಯೇ ಮಾಡಿದ್ದಾರೆ.
ನೆರೆ ಪ್ರವಾಹದಲ್ಲಿ ಮನೆ ಕಳೆದುಕೊಂಡ ನಿಜವಾದ ಫಲಾನುಭವಿಗಳಿಗೆ ಸೂಕ್ತ ಪರಿಹಾರ ನೀಡುವಲ್ಲಿ ತಾರತಮ್ಯವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಅನೇಕ ನಿಜವಾದ ಫಲಾನುಭವಿಗಳು ಮನೆ ಕಳೆದುಕೊಂಡು ತೊಂದರೆಗೀಡಾಗಿದ್ದಾರೆ. ಅಂತವರಿಗೆ ಪರಿಹಾರ ಸಿಗಬೇಕಿತ್ತು. ವಿಪರ್ಯಾಸವಾಗಿ ಶ್ರೀಮಂತರಿಗೆ, ಶಾಸಕರ ಹಿಂಬಾಲಕರಿಗೆ ಪರಿಹಾರ ಬಂದಿದೆ ಆರೋಪಿಸಿದರು.
ಆದರೆ, ನಿಜವಾದ ಅರ್ಹ ಫಲಾನುಭವಿಗಳು ಇನ್ನೂ ಪರಿಹಾರಕ್ಕಾಗಿ ಅಲೆದಾಡುತ್ತಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಹಾನಿಯಾದ ಮನೆಗಳಿಗೆ ಕೇವಲ 50 ಸಾವಿರ ಪರಿಹಾರ ನೀಡಲಾಗಿದೆ. ಜೆಸಿಬಿ ತರಿಸಿ ಮನೆ ಕೆಡವಿಕೊಂಡವರಿಗೆ 5 ಲಕ್ಷ ಪರಿಹಾರ ನೀಡಲಾಗಿದೆ. ಈ ತಾರತಮ್ಯ ಬದಲಾಗಬೇಕು ಕೂಡಲೇ ಸರ್ಕಾರ ಪೋರ್ಟಲ್ ಆರಂಭಿಸಿ ನಿಜವಾದ ಫಲಾನುಭವಿಗಳಿಗೆ ಪರಿಹಾರ ನೀಡಬೇಕು ಎಂದು ಬಸವರಾಜ ಕೊರವರ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಭಾರತ್ ಜೋಡೋ ಯಾತ್ರೆಯ ಬೆಂಬಲ ಕಂಡು ಬಿಜೆಪಿಯವರು ಕೋವಿಡ್ ಭೀತಿ ಶುರು ಮಾಡಿದ್ದಾರೆ; ಡಿ ಕೆ ಶಿವಕುಮಾರ್