ಹುಬ್ಬಳ್ಳಿ:ರಾಷ್ಟ್ರೀಕೃತ ಬ್ಯಾಂಕ್ಗಳ ವಿಲೀನ ಹಾಗೂ ಖಾಸಗೀಕರಣವನ್ನು ವಿರೋಧಿಸಿ ಹುಬ್ಬಳ್ಳಿಯಲ್ಲಿ ಬ್ಯಾಂಕ್ ಕಾರ್ಮಿಕ ಸಂಘಗಳ ಸಂಯುಕ್ತ ವೇದಿಕೆ ವತಿಯಿಂದ ಪಂಜಿನ ಮೆರವಣಿಗೆ ಹಾಗೂ ಪ್ರತಿಭಟನೆ ನಡೆಸಲಾಯಿತು.
ನಗರದ ಕಾಟನ್ ಮಾರ್ಕೆಟ್ನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಾರ್ಪೊರೇಷನ್ ಬ್ಯಾಂಕ್ ಹಿಂಬದಿಯಲ್ಲಿ ಅಂತ್ಯವಾಯಿತು. ಪಂಜಿನ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಬ್ಯಾಂಕ್ಗಳ ವಿಲೀನ ಹಾಗೂ ಖಾಸಗೀಕರಣದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕೇಂದ್ರದ ವಿರುದ್ಧ ಘೋಷಣೆ ಕೂಗಿದರು.
ಹುಬ್ಬಳ್ಳಿಯಲ್ಲಿ ಬ್ಯಾಂಕ್ಗಳ ವಿಲೀನ, ಖಾಸಗೀಕರಣ ವಿರೋಧಿಸಿ ಪಂಜಿನ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಕೆನರಾ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಎಸ್‌ಬಿಐ ಸೇರಿದಂತೆ ಇತರೆ ರಾಷ್ಟ್ರೀಕೃತ ಬ್ಯಾಂಕ್ಗಳ ನೂರಾರು ಸಿಬ್ಬಂದಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. 'ರಾಷ್ಟ್ರೀಕೃತ ಬ್ಯಾಂಕ್ಗಳನ್ನು ಖಾಸಗೀಕರಣ ಮಾಡಲಾಗುತ್ತಿದ್ದು, ಇದರಿಂದ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳಿಗೆ ಅಭದ್ರತೆ ಕಾಡುತ್ತಿದೆ. ಇಂತಹ ನಿರ್ಧಾರಗಳು ಖಂಡನಾರ್ಹ ' ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಬ್ಯಾಂಕ್ಗಳಿಂದ ದೊಡ್ಡ ಮೊತ್ತದ ಸಾಲ ಪಡೆದು ಮರುಪಾವತಿಸದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಸಾಲ ವಸೂಲಾತಿ ಮಾಡಬೇಕು. ಇಲ್ಲವಾದಲ್ಲಿ ಬ್ಯಾಂಕ್ಗಳು ದಿವಾಳಿ ಆಗಲಿವೆ. ಈ ಬಗ್ಗೆ ತುರ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಒತ್ತಾಯಿಸಿದರು. ಪಂಜಿನ ಮೆರವಣಿಗೆ ಹಾಗೂ ಪ್ರತಿಭಟನೆಗೆ ಇತರೆ ಕಾರ್ಮಿಕ ಸಂಘಟನೆಗಳು ಸಹ ಬ್ಯಾಂಕ್ ನೌಕರರಿಗೆ ಬೆಂಬಲ ನೀಡಿ ಧರಣಿಯಲ್ಲಿ ಭಾಗವಹಿಸಿದ್ದವು.