ಹುಬ್ಬಳ್ಳಿ: ಅದು ಹುಬ್ಬಳ್ಳಿ-ಧಾರವಾಡ ಅವಳಿನಗರದ ಮಹತ್ವದ ಯೋಜನೆ. ಈ ಯೋಜನೆ ಪ್ರಾರಂಭವಾದಾಗಿನಿಂದಲೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಯೋಜನೆ ಕಾಮಗಾರಿ ವಿಳಂಬ ಒಂದು ಕಡೆಯಾದರೆ ಮತ್ತೊಂದು ಕಡೆಯಲ್ಲಿ ಪೂರ್ಣಗೊಂಡಿದ್ದರೂ ಪಾಲಿಕೆಗೆ ಹಸ್ತಾಂತರ ಮಾಡಿಲ್ಲ. ಇದು ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ.
2018ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಸ್ಮಾರ್ಟ್‌ಸಿಟಿ ಯೋಜನೆಗಳಲ್ಲಿ ಪೂರ್ಣಗೊಂಡ ಕಾಮಗಾರಿಗಳ ಹಸ್ತಾಂತರ ವಿಚಾರ ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್‌ಸಿಟಿ ಮಧ್ಯೆ ಮುಸುಕಿನ ಗುದ್ದಾಟಕ್ಕೆ ಎಡೆಮಾಡಿಕೊಟ್ಟಿದೆ. ಕಾಮಗಾರಿ ಮುಕ್ತಾಯವಾದರೂ ಹಸ್ತಾಂತರ ಪ್ರಕ್ರಿಯೆ ವಿಳಂಬವಾಗುತ್ತಿವೆ.
ಈ ನಡುವೆ ಪೂರ್ಣಗೊಂಡ ಕಾಮಗಾರಿಗಳ ವರದಿ ಪರಿವೀಕ್ಷಣೆಗೆ ಮೇಯರ್ ಮತ್ತೊಂದು ತಂಡ ರಚಿಸಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಇದು ಸ್ಮಾರ್ಟ್‌ಸಿಟಿ ಕಂಪನಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಇದರಿಂದ ಹಸ್ತಾಂತರ ಕುರಿತಾಗಿ ಅಧಿಕಾರಿಗಳ ಲೆಕ್ಕಾಚಾರ ಬುಡಮೇಲಾಗಿದೆ.
ಹಲವಾರು ಪ್ರಾಜೆಕ್ಟ್ ಬಾಕಿ: ಏಕೆಂದರೆ ಸ್ಮಾರ್ಟ್‌ಸಿಟಿ ಕಂಪನಿ ನಿಯಮಾವಳಿ ಪ್ರಕಾರ, ಐದು ವರ್ಷದಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಿ ಸ್ಥಳೀಯ ಆಡಳಿತ ಪಾಲಿಕೆಗೆ ಹಸ್ತಾಂತರಿಸಬೇಕು. ಇದೀಗ ಐದು ವರ್ಷ ಅವಧಿ ಮುಗಿದಿದ್ದು, ಇನ್ನೂ ಯೋಜನೆಗಳನ್ನು ವಹಿಸಿಕೊಡಲು ಸಾಧ್ಯವಾಗುತ್ತಿಲ್ಲ. ಈಗ ಕೇವಲ 21 ಪ್ರಾಜೆಕ್ಟ್ ಗಳನ್ನು ಮಾತ್ರ ಪಾಲಿಕೆಗೆ ಹಸ್ತಾಂತರ ಮಾಡಿರುವ ಸ್ಮಾರ್ಟ್ ಸಿಟಿ ಇನ್ನೂ ಹಲವಾರು ಪ್ರಾಜೆಕ್ಟ್ ಬಾಕಿ ಉಳಿಸಿಕೊಂಡಿದೆ.
ಇದನ್ನೂ ಓದಿ:ತಂದೆ, ಚಿಕ್ಕಪ್ಪನನ್ನು ಕಳೆದುಕೊಂಡರೂ ಯುಪಿಎಸ್ಸಿ ಹಠ ಬಿಡದ ಚತುರೆ: ಕರ್ನಾಟಕದ ಅಗ್ರ ರ್‍ಯಾಂಕರ್ ಮನದಾಳವಿದು!