ಕರ್ನಾಟಕ

karnataka

ETV Bharat / state

Jagdish Shettar: ಕೆಲವರು ಕಾಂಗ್ರೆಸ್​ ಪಕ್ಷಕ್ಕೆ ಬರುವ ಪ್ರಕ್ರಿಯೆ ಚಾಲ್ತಿಯಲ್ಲಿದೆ: ಜಗದೀಶ್​ ಶೆಟ್ಟರ್ - ಈಟಿವಿ ಭಾರತ್​ ಕನ್ನಡ ನ್ಯೂಸ್​

ಇಡೀ ರಾಜ್ಯದಲ್ಲಿಯೇ ಕೆಲವು ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಬರುವ ಪ್ರಕ್ರಿಯೆ ಬಗ್ಗೆ ಮಾತುಕತೆಗಳು ನಡೆಯುತ್ತಿವೆ ಎಂದು ವಿಧಾನ ಪರಿಷತ್​ ಸದಸ್ಯ ಜಗದೀಶ್​​ ಶೆಟ್ಟರ್​ ತಿಳಿಸಿದರು. ​

ಜಗದೀಶ್​ ಶೆಟ್ಟರ್
ಜಗದೀಶ್​ ಶೆಟ್ಟರ್

By ETV Bharat Karnataka Team

Published : Aug 31, 2023, 5:38 PM IST

ಕೆಲವರು ಕಾಂಗ್ರೆಸ್​ ಪಕ್ಷಕ್ಕೆ ಬರುವ ಪ್ರಕ್ರಿಯೆ ಚಾಲ್ತಿಯಲ್ಲಿದೆ: ಜಗದೀಶ್​ ಶೆಟ್ಟರ್

ಧಾರವಾಡ : ಕೆಲವರು ಕಾಂಗ್ರೆಸ್‌ ಪಕ್ಷಕ್ಕೆ ಬರುತ್ತಿದ್ದಾರೆ. ಇದು ಒಂದೇ ದಿನಕ್ಕೆ ಆಗುವುದಲ್ಲ. ಈ ಬಗ್ಗೆ ಮಾತುಕತೆಗಳು ನಡೆದಿದ್ದು, ಪಕ್ಷಕ್ಕೆ ಕರೆದುಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಮಾಜಿ ಸಿಎಂ, ವಿಧಾನ ಪರಿಷತ್​ ಸದಸ್ಯ ಜಗದೀಶ್​ ಶೆಟ್ಟರ್ ಹೇಳಿದ್ದಾರೆ.

ಈ ಕುರಿತು ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಒಂದು ಜಿಲ್ಲೆ ಅಂತಾ ಹೇಳುವುದಿಲ್ಲ. ಇಡೀ ಕರ್ನಾಟಕದ ಬಗ್ಗೆ ನಾನು ಮಾತನಾಡುತ್ತಿದ್ದೇನೆ. ಬಹಳಷ್ಟು ಜನ ಸಂಪರ್ಕದಲ್ಲಿ ಇದ್ದಾರೆ. ಆದರೆ ಕರೆದುಕೊಳ್ಳುವ ಬಗ್ಗೆ ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತದೆ. ಪಕ್ಷದ ನಿರ್ಧಾರಗಳ ಬಳಿಕ ಕೆಲವರು ಕಾಂಗ್ರೆಸ್ ಸೇರಿಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸಚಿವ ಅಮಿತ್ ಶಾ ಅವರು ತಮಗೆ ಫೋನ್ ಮಾಡಿದ್ದರಂತೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶೆಟ್ಟರ್​, ಇದು ಹಳೆಯ ವಿಷಯ. ನಾನು ಆವತ್ತು ಉಡುಪಿಯಲ್ಲಿದ್ದೆ. ಇದೇ ರೀತಿ ಸುಳ್ಳು ಸುದ್ದಿ ಹಬ್ಬಿತ್ತು. ಕೆಲ ಮಾಧ್ಯಮದವರು ನನಗೆ ಕರೆ ಮಾಡಿ ಈ ಬಗ್ಗೆ ಕೇಳಿದ್ದರು. ನನಗೆ ಅಮಿತ್​​ ಶಾ ಆಗಲಿ, ಮತ್ತೊಬ್ಬರಾಗಲಿ ಕರೆ ಮಾಡಿಲ್ಲ. ಅದರ ಮೂಲ ಹುಡುಕಿ. ಈ ರೀತಿ ಸುಳ್ಳು ಸುದ್ದಿ ಹೇಗೆ ಹಬ್ಬಿದೆ ಎಂದು ನಾನು ಹೇಳಿದ್ದೇನೆ. ಇದು ಸಂಪೂರ್ಣ ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದರು.

ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತನಾಡಿ, ಅವರ ಜೊತೆ ನಾನು ವೈಯಕ್ತಿಕವಾಗಿ ಮಾತನಾಡಿಲ್ಲ. ಅವರ ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ ಎಂದ ಶೆಟ್ಟರ್​, ಗ್ಯಾರಂಟಿ ಯೋಜನೆಗಳ ಬಗ್ಗೆ ಅಂತಾರಾಷ್ಟ್ರೀಯ ಸಂಸ್ಥೆಯಿಂದ ಅಧ್ಯಯನ ವಿಚಾರ ಚುನಾವಣೆಯಲ್ಲಿ ಪಕ್ಷ ಐದು ಗ್ಯಾರಂಟಿ ಘೋಷಣೆ ಮಾಡಿತ್ತು. ಇದಕ್ಕೆಲ್ಲ‌ ಹಣ ಎಲ್ಲಿಂದ ತರುತ್ತಾರೆ ಅಂತಾ ಅನೇಕರು ಪ್ರಶ್ನೆ ಮಾಡಿದ್ದರು. ಪ್ರತಿಪಕ್ಷದವರು ಅನುಷ್ಠಾನ ಬೇಗ ಮಾಡಿ ಅಂತಾ ಒತ್ತಾಯ ಶುರು ಮಾಡಿದ್ದಾರೆ.

ಬಳಿಕ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಹಣ ನಿಗದಿ ಮಾಡಿದ್ದರು. ಇದರಿಂದಾಗಿ ನಾಲ್ಕು ಗ್ಯಾರಂಟಿಗಳು ಜಾರಿಗೆ ಬಂದಿವೆ. ಬಡವರು, ದೀನ ದಲಿತರು ಖುಷಿಯಲ್ಲಿದ್ದಾರೆ. ಯಾವ ರಾಜ್ಯದಲ್ಲಿಯೂ ಇಂತಹ ಯೋಜನೆ ಆಗಿಲ್ಲ. ದೇಶದ ಇತಿಹಾಸದಲ್ಲಿಯೇ ಇದು ಮೊದಲು. ನುರಿತ ತಜ್ಞರು ಈ ಬಗ್ಗೆ ಅಧ್ಯಯನಕ್ಕೆ ಮುಂದಾಗಿದ್ದಾರೆ. ಹೀಗಾಗಿ ಸರ್ಕಾರಕ್ಕೆ ನಾನು ಅಭಿನಂದನೆ ಸಲ್ಲಿಸುವೆ ಎಂದು ಶೆಟ್ಟರ್​ ತಿಳಿಸಿದರು.

ಬಿಜೆಪಿ ಅವಧಿಯ ಹಗರಣಗಳ ತನಿಖೆ : ಹಿಂದೆ ಕಾಂಗ್ರೆಸ್ ವಿರೋಧ ಪಕ್ಷದಲ್ಲಿತ್ತು. ಆಗ ಕೆಲ ಹಗರಣಗಳ ತನಿಖೆಗೆ ಆಗ್ರಹಿಸಲಾಗಿತ್ತು. ಆದರೆ ಆಗಿನ ಸರ್ಕಾರ ತನಿಖೆ ಮಾಡಲಿಲ್ಲ. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಆಗ ಮಾಡಿದ ಆರೋಪಗಳ ತನಿಖೆ ಶುರುವಾಗಿದೆ ಎಂದು ಹೇಳಿದರು. ಬಿಜೆಪಿ ವಿಪಕ್ಷ ನಾಯಕ ಆಯ್ಕೆ ವಿಳಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾವ ರೀತಿ ಶೋಚನೀಯ ಸ್ಥಿತಿಗೆ ಬಂದಿದೆ ನೋಡಿ. ಪಕ್ಷ ಲೀಡರ್‌ಲೆಸ್ ಪಾರ್ಟಿ ಆಗಿದೆ. ಕೆಲವೇ ಕೆಲವರ ಹಿಡಿತದಲ್ಲಿ ಬಿಜೆಪಿ ಇದೆ. ಒಂದು ಕೆಲವರ ಹಿಡಿತಕ್ಕೆ ಸಿಕ್ಕರೇ ಏನಾಗುತ್ತದೆ ಅನ್ನೋದಕ್ಕೆ ಇದೇ ಉದಾಹರಣೆಯಾಗಿದೆ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ :ನಮ್ಮ ಅವಧಿಯಲ್ಲಿ ತಮಿಳುನಾಡಿಗೆ ಬಿಟ್ಟ ನೀರಿನ ದಾಖಲೆ ಬಿಡುಗಡೆ ಮಾಡಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ

ABOUT THE AUTHOR

...view details