ಹುಬ್ಬಳ್ಳಿ:ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಆತ್ಮನಿರ್ಭರ ಭಾರತಕ್ಕೆ ನಾವೆಲ್ಲ ಸಂಕಲ್ಪ ಮಾಡೋಣ, ಓಡಿಶಾದ ಸಾಮಾನ್ಯ ಕುಟುಂಬದಿಂದ ಬಂದಿರುವ ಮಹಿಳೆಯನ್ನು ಗೌರವಿಸುವ ಮೂಲಕ ಹುಬ್ಬಳ್ಳಿ ಧಾರವಾಡದ ಜನತೆ ದೇಶದ ಸಮಸ್ತ ಮಹಿಳೆಯರನ್ನು ಗೌರವಿಸಿದ್ದಾರೆ ಎಂದು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಹೇಳಿದರು.
ಹುಬ್ಬಳ್ಳಿ- ಧಾರವಾಡ ಮಹಾನಗರಪಾಲಿಕೆಯು ಇಲ್ಲಿನ ಕರ್ನಾಟಕ ಜಿಮ್‌ಖಾನಾ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೌರಸನ್ಮಾನ ಸ್ವೀಕರಿಸಿ ಮಾತನಾಡಿದರು.
ಹುಬ್ಬಳ್ಳಿ- ಧಾರವಾಡ ಅವಳಿನಗರಗಳು ಕರ್ನಾಟಕ ಮಾತ್ರವಲ್ಲ, ಸಮಗ್ರ ಭಾರತದ ಸಾಂಸ್ಕೃತಿಕ, ಐತಿಹಾಸಿಕ ನಗರಗಳಾಗಿವೆ. ಉತ್ತರ ಕರ್ನಾಟಕದ ಈ ನಗರಗಳಲ್ಲಿ ಕನ್ನಡ, ಮರಾಠಿ ಭಾಷೆಗಳ ಅದ್ಭುತ ಸಂಗಮವಿದೆ. ಅಧ್ಯಾತ್ಮ, ಸಾಂಸ್ಕೃತಿಕ, ಶೈಕ್ಷಣಿಕ ಮಾತ್ರವಲ್ಲ, ಆಧುನಿಕವಾಗಿಯೂ ಈ ನಗರಗಳು ಅಭಿವೃದ್ಧಿ ಪಥದಲ್ಲಿ ಸಾಗುತ್ತಿವೆ. ಉತ್ತರ ಕರ್ನಾಟಕವು ಸಾಂಸ್ಕೃತಿಕ, ಆಧ್ಯಾತ್ಮಿಕತೆ ಹಾಗೂ ಶೈಕ್ಷಣಿಕ ಸಾಧನೆ ಹಾಗೂ ಆಧುನಿಕ ಸೌಲಭ್ಯಗಳಿಂದ ದೇಶದಲ್ಲಿ ಹೆಸರುವಾಸಿಯಾಗಿದೆ. ಪ್ರಾಚೀನ ಸಾಧನೆಯ ಜೊತೆಗೆ ಅಧುನಿಕತೆಯ ಅಭಿವೃದ್ದಿಗೆ ತೆರೆದುಕೊಂಡಿದೆ.
ಇಡೀ ಮಹಿಳಾ ವರ್ಗಕ್ಕೆ ಸಂದ ಸನ್ಮಾನ: ಹುಬ್ಬಳ್ಳಿ - ಧಾರವಾಡ ಜನರ ಪ್ರೀತಿಯು ನನ್ನನ್ನು ಪುಳಕಿತಗೊಳಿಸಿದೆ. ಇದು ಭಾರತದ ರಾಷ್ಟ್ರಪತಿಗೆ ಸಂದ ಸನ್ಮಾನ ಮಾತ್ರವಲ್ಲ; ಇದು ಇಡೀ ದೇಶದ ಮಹಿಳೆಯರಿಗೆ ಸಂದ ಸನ್ಮಾನವಾಗಿದೆ ಎಂದು ರಾಷ್ಟ್ರಪತಿ ಮುರ್ಮು ಅವರು ಅಭಿಮಾನ ವ್ಯಕ್ತಪಡಿಸಿದರು.
ಇಡೀ ಭಾರತದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಉಲ್ಲೇಖನೀಯವಾಗಿದೆ. ಪ್ರಾಚೀನತೆ ಮತ್ತು ಆಧುನಿಕತೆಯ ಸಂಗಮವಾಗಿರುವ ಹುಬ್ಬಳ್ಳಿ-ಧಾರವಾಡ ಶಿಕ್ಷಣ ಸಂಸ್ಥೆಗಳ ಮೂಲಕ ವಿದ್ಯಾದಾನ ಮಾಡುವ ಮೂಲಕ ವಿದ್ಯಾಕಾಶಿಯಾಗಿ ಹೊರಹೊಮ್ಮಿದೆ.
ಸಾಹಿತ್ಯ ಕ್ಷೇತ್ರದಲ್ಲಿ ದ. ರಾ ಬೇಂದ್ರೆ, ವಿ. ಕೃ ಗೋಕಾಕ್ ಅವರ ಕೊಡುಗೆ ಸ್ಮರಿಸಿದ ಅವರು, ಸಂಗೀತ ಕ್ಷೇತ್ರದಲ್ಲಿ ಭೀಮಸೇನ್ ಜೋಶಿ, ಪಂಡಿತ ಬಸವರಾಜ ರಾಜಗುರು ಮತ್ತಿತರರ ಸಾಧನೆ ಉಲ್ಲೇಖಿಸಿದರು. ಸಂತ ಬಸವೇಶ್ವರ, ಸಿದ್ಧಾರೂಢ ಮಹಾರಾಜರ ಆಧ್ಯಾತ್ಮಿಕ ಮಾರ್ಗದಿಂದ ಈ ಕ್ಷೇತ್ರವು ಧನ್ಯವಾಗಿದೆ ಎಂದರು.