ಧಾರವಾಡ :ಸ್ವಾಮೀಜಿಗಳು ತಲೆಯ ಮೇಲೆ ಬಟ್ಟೆ ಹಾಕಿಕೊಳ್ಳುತ್ತಾರೆ. ಅದನ್ನ ನೀವು ಪ್ರಶ್ನೆ ಮಾಡುತ್ತೀರಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದರು. ಈ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯಿಸಿದ್ದು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿ.. ಈ ಕುರಿತು ಮಾತನಾಡಿದ ಅವರು, ಹಿಜಾಬ್ ಸಂಬಂಧ ನ್ಯಾಯಾಲಯ ತೀರ್ಪು ನೀಡಿದೆ. ಅದರ ಬಗ್ಗೆ ಮಾತನಾಡುವಾಗ ವಿಚಾರ ಮಾಡಬೇಕು. ಇದು ಅವಮಾನಕರ ಹೇಳಿಕೆ. ಸಂತರ ಪರಂಪರೆ ಪ್ರಶ್ನೆ ಮಾಡಿದ್ದು ಅಪರಾಧ, ಇದು ಕೀಳು ಮಟ್ಟದ ಹೇಳಿಕೆ. ಪೇಟಾವನ್ನು ಹಿಜಾಬ್ಗೆ ಹೋಲಿಸಿರುವುದು ಸರಿಯಲ್ಲ ಎಂದು ಮುತಾಲಿಕ್ ಹರಿಹಾಯ್ದರು.
ಇದನ್ನೂ ಓದಿ:ಮುಂದಿನ ಚುನಾವಣೆಯೇ ನನ್ನ ಕೊನೆಯ ಚುನಾವಣೆ: ಸಿದ್ದರಾಮಯ್ಯ
ಸ್ವಲ್ಪ ಮಾತನಾಡುವಾಗ ಕಾಮನ್ಸೆನ್ಸ್ ಬೇಕು. ನೀವು ಸಿಎಂ ಆಗಿದ್ರಿ, ಜವಾಬ್ದಾರಿ ಸ್ಥಾನದಲ್ಲಿ ಇದ್ದವರು. ಈ ಹೇಳಿಕೆ ಹಿಂದೂ ಸಮಾಜವನ್ನು ಅಪಮಾನ ಮಾಡುವಂತದ್ದು. ಹಾಗಾಗಿ, ಸಿದ್ದರಾಮಯ್ಯ ಕ್ಷಮೆ ಕೇಳಬೇಕು. ಕೋರ್ಟ್ ಹಿಜಾಬ್ ಬ್ಯಾನ್ ಮಾಡಿಲ್ಲ. ಕ್ಲಾಸ್ ರೂಂನಲ್ಲಿ ಹಾಕಿಕೊಳ್ಳಲು ಅವಕಾಶ ನೀಡಿಲ್ಲ ಅಷ್ಟೇ..
ಸಿದ್ದರಾಮಯ್ಯ ಅವರ ರಾಜಕೀಯ ಅಂತ್ಯ ಬಂದಿದೆ. ಹಿಂದೂ ಸಮಾಜ ನಿಮ್ಮನ್ನು ಮೂಲೆಗುಂಪು ಮಾಡುತ್ತೆ. ನಿಮಗೆ ಹಿಂದೂಗಳು ಮತ ಹಾಕುವುದಿಲ್ಲ. ಮುಸ್ಲಿಂರೇ ಕೋರ್ಟ್‌ಗೆ ಹೋಗಿದ್ದು, ಅವರಿಗೆ ನ್ಯಾಯಾಲಯ ಸ್ಪಷ್ಟನೆ ಕೊಟ್ಟಿದೆ. ಮಠದ ಪರಂಪರೆಗೆ ಅವಮಾನ ಮಾಡಿದ್ದು ಸರಿಯಲ್ಲ ಎಂದು ಹೇಳಿದರು.