ಹುಬ್ಬಳ್ಳಿ:ವಾಣಿಜ್ಯ ನಗರಿಯಲ್ಲಿ ನಡೆದ ಸ್ಫೋಟ ಪ್ರಕರಣ ರಾಷ್ಟ್ರೀಯ ಷಡ್ಯಂತ್ರವಾಗಿದೆ. ಶ್ರೀರಾಮ ಜನ್ಮ ಭೂಮಿಯ ನಿರ್ಣಯದ ಹಿನ್ನೆಲೆಯಲ್ಲಿ ನಡೆದ ಕುತಂತ್ರ ಇದು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗಂಭೀರವಾದ ಆರೋಪ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಸ್ಫೋಟ ರಾಷ್ಟ್ರೀಯ ಷಡ್ಯಂತ್ರ: ಮುತಾಲಿಕ್ - ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್
ಹುಬ್ಬಳ್ಳಿ ನಗರದಲ್ಲಿ ನಡೆದ ಸ್ಫೋಟ ಪ್ರಕರಣ ರಾಷ್ಟ್ರೀಯ ಷಡ್ಯಂತ್ರವಾಗಿದೆ. ಶ್ರೀರಾಮ ಜನ್ಮ ಭೂಮಿಯ ನಿರ್ಣಯದ ಹಿನ್ನೆಲೆಯಲ್ಲಿ ನಡೆದ ಕುತಂತ್ರ ಇದು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗಂಭೀರವಾದ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಹುಬ್ಬಳ್ಳಿ ಸ್ಫೋಟ ಪ್ರಕರಣವನ್ನು ಹಗುರವಾಗಿ ತೆಗೆದುಕೊಂಡಿವೆ. ಇದುವರೆಗೂ ಬೆಂಗಳೂರಿನಿಂದ ಪರೀಕ್ಷೆಗಾಗಿ ಟೀಂ ಬಂದಿಲ್ಲ. ಇದು ಸರ್ಕಾರಗಳ ನಿರ್ಲಕ್ಷ್ಯ ಎತ್ತಿ ತೋರಿಸುತ್ತಿದೆ. ರೈಲು ನಿಲ್ದಾಣದಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಿಸಿಟಿವಿ ಕ್ಯಾಮರಾ ಹಾಕಲಾಗಿದೆ. ಆದ್ರು ಏನೂ ಪ್ರಯೋಜನವಾಗಿಲ್ಲ. ಇದೊಂದು ರಾಷ್ಟ್ರೀಯ ಷಡ್ಯಂತ್ರವಾಗಿದೆ. ಶ್ರೀರಾಮ ಜನ್ಮ ಭೂಮಿಯ ತೀರ್ಪಿನ ಹಿನ್ನೆಲೆಯಲ್ಲಿ ನಡೆದಿರುವ ಕುತಂತ್ರ ಇದು ಎಂದರು.
ದೇಶದ ಹಲವು ರಾಜ್ಯಗಳಲ್ಲಿ ಹಿಂಸಾಚಾರ ನಡೆಯುತ್ತಿವೆ. ಇದನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಗುರವಾಗಿ ತೆಗೆದುಕೊಳ್ಳಬಾರದು. ಪಾಕಿಸ್ತಾನ, ಅಫ್ಘಾನಿಸ್ತಾನ ರಾಷ್ಟ್ರಗಳು ಹತಾಶವಾಗಿ ಅನಾಹುತ ನಡೆಸಲು ಸಂಚು ನಡೆಸಿವೆ. ಕಮಲೇಶ ತಿವಾರಿ ಕೊಲೆ ಆರೋಪಿ ಹುಬ್ಬಳ್ಳಿಯಲ್ಲಿ ಸಿಕ್ಕಿಬಿದ್ದಿದ್ದಾನೆ ಎಂದರೆ ಅದರ ಜಾಲ ಎಷ್ಟಿದೆ ಎಂಬುದು ತಿಳಿಯುತ್ತದೆ. ರಾಮ ಜನ್ಮ ಭೂಮಿ ನಿರ್ಣಯ ಮುಂದಿನ ತಿಂಗಳೊಳಗೆ ಬರುತ್ತಿರುವ ಹಿನ್ನೆಲೆಯಲ್ಲಿ ವ್ಯವಸ್ಥಿತವಾಗಿ ಈ ಕೃತ್ಯ ನಡೆಸಲಾಗುತ್ತಿದೆ ಎಂಬ ಸಂಶಯ ಇದೆ ಎಂದು ಮುತಾಲಿಕ್ ಹೇಳಿದರು.