ಹುಬ್ಬಳ್ಳಿ (ಧಾರವಾಡ):ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹಿಂದೂಗಳ ರಕ್ಷಣೆಗಾಗಿ ಪರ್ಯಾಯ ರಾಜಕೀಯ ಶಕ್ತಿ ಬೇಕಾಗಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ಎರಡನೇ ಆದಿತ್ಯನಾಥನಾಗಿ ಕೆಲಸ ಮಾಡುವೆ:ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸುಳ್ಯದಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆಯಾಗಿದ್ದು ಖಂಡನೀಯ. ರಾಜ್ಯದಲ್ಲಿ ಜನರ ರಕ್ಷಣೆ ದೃಷ್ಟಿಯಿಂದ ಪರ್ಯಾಯ ರಾಜಕಾರಣದ ಅವಶ್ಯಕತೆ ಇದೆ. ಹೀಗಾಗಿ ಎಲ್ಲ ಸ್ವಾಮೀಜಿಗಳೊಂದಿಗೆ ಚರ್ಚೆ ನಡೆದಿದೆ. ನನಗೆ ಏನಾದರೂ ಅಧಿಕಾರ ಸಿಕ್ಕರೆ ರಾಜ್ಯದಲ್ಲಿ ಎರಡನೇ ಆದಿತ್ಯನಾಥ ಆಗಿ ಕೆಲಸ ಮಾಡುವೆ ಎಂದು ಹೇಳಿದರು.
ಭ್ರಷ್ಟಾಚಾರದಲ್ಲಿ ತಲ್ಲೀನರಾಗಿದ್ದಾರೆ: ಅಧಿಕಾರಕ್ಕೆ ಬರಲು ಹಿಂದೂಗಳು ಬೇಕು, ಆದರೆ ಅವರಿಗೆ ರಕ್ಷಣೆ ಕೊಡುವಲ್ಲಿ ಸಂಪೂರ್ಣ ವಿಫಲರಾಗಿದ್ದೀರಿ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಎಲ್ಲಿದೆ? ಎಂದು ಮುತಾಲಿಕ್ ಪ್ರಶ್ನಿಸಿದರು. ಪ್ರವೀಣ್ ಹತ್ಯೆಯಿಂದ ನೊಂದ ಬಿಜೆಪಿಯ ಹಲವಾರು ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ. ಕೇವಲ ಅಧಿಕಾರಕ್ಕೆ ಒಡ್ಡಿಕೊಳ್ಳದೇ ಹಿಂದೂ ಧರ್ಮಕ್ಕೆ ಗೌರವ ಕೊಟ್ಟಿದ್ದು ಅಭಿನಂದನಾರ್ಹ. ಆದರೆ ಸರ್ಕಾರದ ಪ್ರತಿನಿಧಿಗಳು ಹತ್ಯೆ ಕುರಿತು ಮಾತನಾಡಬೇಕಿತ್ತು, ಅವರು ರಾಜೀನಾಮೆ ನೀಡಬೇಕಿತ್ತು. ಆದರೆ ಅವರು ಭ್ರಷ್ಟಾಚಾರದಲ್ಲಿ ತಲ್ಲೀನರಾಗಿದ್ದಾರೆಂದು ಆರೋಪಿಸಿ ಕೆಂಡಾಮಂಡಲರಾದರು.
ರಾಜೀನಾಮೆ ನೀಡಲಿ: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಈ ಹಿಂದೆ ತಮ್ಮ ಭಾಷಣದಲ್ಲಿ 'ಒಬ್ಬ ಬಿಜೆಪಿ ಕಾರ್ಯಕರ್ತನನ್ನು ಮುಟ್ಟಿ ನೋಡಲಿ' ಎಂದು ಹೇಳಿದ್ದರು. ಆದರೆ ಇಂದು ಅವರು ಪ್ರತಿನಿಧಿಸುವ ಕ್ಷೇತ್ರದಲ್ಲಿಯೇ ಹತ್ಯೆಯಾಗಿದೆ. ಅವರು ತಕ್ಷಣ ರಾಜೀನಾಮೆ ನೀಡಬೇಕೆಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.