ಹುಬ್ಬಳ್ಳಿ:ಇಲ್ಲಿನ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿರೋಧಿಸುವವರಿಗೆ ಶಾಪ ತಟ್ಟದೇ ಬಿಡದು. ನಮ್ಮ ಹೋರಾಟಕ್ಕೆ ಕೋರ್ಟ್ ನ್ಯಾಯ ದೊರಕಿಸಿಕೊಟ್ಟಿದೆ. ಸರ್ಕಾರಕ್ಕೆ ಸೇರಿದ ಜಾಗದಲ್ಲಿ ನ್ಯಾಯಸಮ್ಮತವಾಗಿ ಗಣೇಶನ ಪೂಜೆ ಮಾಡಲಾಗುತ್ತಿದೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ಹುಬ್ಬಳ್ಳಿಯ ಈದ್ಗಾ ಮೈದಾನದ ಗಣೇಶ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಐತಿಹಾಸಿಕ ದಿನವಾಗಿದೆ. ಈದ್ಗಾದಲ್ಲಿ ಪ್ರಾರ್ಥನೆ ಮಾಡಲಾಗುತ್ತದೆ. ಗಣೇಶನ ಪ್ರತಿಷ್ಠಾಪನೆ ಮಾಡಲು ವಿರೋಧ ಯಾಕೆ?. ಕೋರ್ಟ್ಗೆ ನಮ್ಮ ಭಾವನೆ ಅರ್ಥವಾಗಿದೆ. ಹೋರಾಟಕ್ಕೆ ನ್ಯಾಯ ಕೊಟ್ಟಿದೆ. ಇದನ್ನು ವಿರೋಧಿಸಿದವರಿಗೆ ಕೋರ್ಟ್ ಛೀಮಾರಿ ಹಾಕಿದೆ ಎಂದರು.
ಗಣೇಶೋತ್ಸವ ಆರಂಭಿಸಿ 129 ವರ್ಷವಾಗಿದೆ. ಬ್ರಿಟಿಷರು ಕೂಡ ಆಚರಣೆಯನ್ನು ವಿರೋಧಿಸಲಿಲ್ಲ. ಆದರೆ, ಕಾಂಗ್ರೆಸ್ನವರು ನೀಡಿದ ಕುಮ್ಮಕ್ಕಿನಿಂದ ಮುಸ್ಲಿಮರು ಕೋರ್ಟ್ ಮೆಟ್ಟಿಲೇರಿದ್ದಾರೆ. ಸರ್ವಪಾಪ ವಿನಾಶಕನ ಆಚರಣೆಗೆ ಅಡ್ಡಿಪಡಿಸುವವರಿಗೆ ಆ ಗಣೇಶನ ಶಾಪ ತಟ್ಟದೇ ಬಿಡದು ಎಂದು ಆಕ್ರೋಶ ವ್ಯಕ್ತಪಡಿಸಿದರು.