ಹುಬ್ಬಳ್ಳಿ: ವಿಧಾನಸಭಾ ಚುನಾವಣೆಗೆ ಟಿಕೆಟ್ ಸಿಗದೆ ನಿರಾಶರಾದ ಮುಖಂಡರು ಪಕ್ಷಾಂತರ ನಡೆಸುತ್ತಿದ್ದಾರೆ. ಈ ಬೆನ್ನಲ್ಲೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಲಿದ್ದಾರೆ ಎಂದು ಹೇಳುವ ಮೂಲಕ ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಕರ್ನಾಟಕ ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೂರೆ ಹೊಸ ಬಾಂಬ್ ಸಿಡಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೂ ಮುನ್ನ ನಗರದ ಶ್ರೀ ಸಿದ್ಧಾರೂಢ ಮಠದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, "ಈಗಾಗಲೇ ಕಾಂಗ್ರೆಸ್ಗೆ ಸಾಕಷ್ಟು ನಾಯಕರು ಬಂದಿದ್ದು, ಇನ್ನೂ ಕೆಲವರು ಬರುತ್ತಾರೆ. ಇದರಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡ ಪ್ರಮುಖರು. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಈಗಾಗಲೇ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಪ್ರಹ್ಲಾದ್ ಜೋಶಿ ಹಾಗೂ ಜಗದೀಶ್ ಶೆಟ್ಟರ್ ಒಂದೇ ನಾಣ್ಯದ ಎರಡು ಮುಖಗಳು. ಇಬ್ಬರೂ ಜೊತೆ ಜೊತೆಗೆ ರಾಜಕಾರಣ ಮಾಡಿದವರು. ಒಬ್ಬರನ್ನು ಬಿಟ್ಟು ಮತ್ತೊಬ್ಬರು ಇರುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಜಗದೀಶ್ ಶೆಟ್ಟರ್ ನಡೆಯನ್ನೇ ಜೋಶಿ ಕೂಡ ಅನುಸರಿಸ್ತಾರೆ. ಅದಕ್ಕೆಂದೇ ಹುಬ್ಬಳ್ಳಿ - ಧಾರವಾಡ ಪಶ್ಚಿಮ ಕ್ಷೇತ್ರದ ಟಿಕೆಟ್ ಘೋಷಣೆ ವಿಳಂಬವಾಯಿತು. ಪರಿಣಾಮ ಈಗ ನನಗೆ ಟಿಕೆಟ್ ಕೊಡಲಾಗಿದೆ. ಮುಂದಿನ ದಿನಗಳಲ್ಲಿ ಪ್ರಹ್ಲಾದ್ ಜೋಶಿ ಕಾಂಗ್ರೆಸ್ಗೆ ಬರ್ತಾರೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗ್ತಾರೆ. ಕ್ಷೇತ್ರದಲ್ಲಿ 11 ಜನ ಆಕಾಂಕ್ಷಿಗಳಿದ್ದರು. ಈ ಪೈಕಿ ನನಗೆ ಟಿಕೆಟ್ ಸಿಕ್ಕಿದ್ದು, ಉಳಿದವರು ನನ್ನನ್ನು ಬೆಂಬಲಿಸಲಿದ್ದಾರೆ ಎಂದರು. ನಾಮಪತ್ರ ಸಲ್ಲಿಕೆಗೂ ಮುನ್ನ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ ಉಭಯ ಶ್ರೀಗಳ ಗದ್ದುಗೆ ದರ್ಶನ ಪಡೆದುಕೊಂಡರು.