ಹುಬ್ಬಳ್ಳಿ:ನಾನು ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ಇರಲಿಲ್ಲ. ಆದರೆ ಯಾರೂ ಸಹ ಬಹಿರಂಗ ಹೇಳಿಕೆಗಳನ್ನು ನೀಡಬಾರದು. ಪಕ್ಷದ ವಿರುದ್ಧ ಬಹಿರಂಗವಾಗಿ ಮಾತನಾಡುವುದು ಸರಿಯಲ್ಲ, ಅದನ್ನು ನಿಲ್ಲಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, ಯತ್ನಾಳ್ ಹೇಳಿಕೆಯಿಂದ ಪಕ್ಷಕ್ಕೆ ಆಗ್ತಿರುವ ಡ್ಯಾಮೇಜ್ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು. ಪಕ್ಷದ ವಿರುದ್ಧ ಬಹಿರಂಗ ಹೇಳಿಕೆಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.
ಸರ್ಕಾರದ ವಿರುದ್ಧ ಮಾತನಾಡುತ್ತಿದ್ದ ಶಾಸಕರಿಗೆ ವಿಶೇಷ ಸ್ಥಾನಮಾನ ವಿಚಾರಕ್ಕೆ ಮಾತನಾಡಿದ ಜೋಶಿ, "ಈಶ್ವರಪ್ಪ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಯಾವುದೋ ಕೆಲಸದ ನಿಮಿತ್ತ ಹುಬ್ಬಳ್ಳಿಗೆ ಬಂದಿದ್ದರು. ನನ್ನನ್ನು ಭೇಟಿಯಾಗಿ ವಾಪಸ್ ಆಗಿದ್ದಾರೆ. ಈಶ್ವರಪ್ಪ ಮಗ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಓಡಾಡ್ತಿದ್ದಾನೆ. ಟಿಕೆಟ್ ವಿಷಯವನ್ನು ನಾವು ಮತ್ತು ಅವರು ಕೂತು ತೀರ್ಮಾನ ಮಾಡೋಕೆ ಆಗಲ್ಲ" ಎಂದರು.
ಸರ್ಕಾರದ ವಿರುದ್ಧ ಮಾತನಾಡುತ್ತಿದ್ದ ಶಾಸಕರಿಗೆ ವಿಶೇಷ ಸ್ಥಾನಮಾನ ವಿಚಾರದ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಿಎಂ ವಿರುದ್ಧ ಮಾತನಾಡಿದರೆ ವಿಶೇಷ ಸ್ಥಾನಮಾನ ಸಿಗುತ್ತೆ ಅಂತ ಖಾತ್ರಿ ಆಯ್ತು. ಕೆಲವರಿಗೆ ನೀಡಿದ ವಿಶೇಷ ಸ್ಥಾನಮಾನ ನೀಡಿದ್ದಾರೆ. ಸಿಎಂಗೆ ಬೈದರೆ ಒಂದು ಸ್ಥಾನಮಾನ ಸಿಗುತ್ತೆ ಅನ್ನೋದನ್ನು ಸಿದ್ದರಾಮಯ್ಯ ಸಾಬೀತು ಮಾಡಿದ್ದಾರೆ. ಮುಂದೆ ಯಾರ್ಯಾರಿಗೆ ಏನೇನು ಸ್ಥಾನಮಾನ ಕೊಡ್ತಾರೋ ನೋಡಬೇಕು ಎಂದು ಜೋಶಿ ವ್ಯಂಗ್ಯವಾಡಿದರು.