ಹುಬ್ಬಳ್ಳಿ:ಚೈತ್ರಾ ಕುಂದಾಪುರ ತಪ್ಪು ಮಾಡಿದರೆ ಕಾನೂನು ರೀತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, ಯಾರ್ ಯಾರೋ ದೊಡ್ಡವರ ಹೆಸರು ಹೇಳಿ ಟೋಪಿ ಹಾಕಿರುತ್ತಾರೆ. ಇದನ್ನು ಒಂದು ಪಕ್ಷಕ್ಕೆ ಜೋಡಿಸೋದು ಸರಿಯಲ್ಲ. ಚೈತ್ರಾ ಕುಂದಾಪುರ ಬಿಜೆಪಿ ಸ್ಟಾರ್ ಪ್ರಚಾರಕಿ ಅಲ್ಲ. ಸ್ಟಾರ್ ಪ್ರಚಾರಕಿ ಆಗಲು ಪದಾಧಿಕಾರಿಗಳಾಗಿರಾಬೇಕು. ನಮ್ಮ ಪಕ್ಷಕ್ಕೂ ಅವರಿಗೂ ಸಂಬಂಧ ಇಲ್ಲ. ಅದರ ಬಗ್ಗೆ ತನಿಖೆಯಾಗುತ್ತಿದೆ ಎಂದರು.
ಕಾಂಗ್ರೆಸ್ ಪಕ್ಷ ಈ ಬಗ್ಗೆ ತುಂಬಾ ಮಾತನಾಡುತ್ತಿದೆ. ಕಳೆದ ಹಲವು ವರ್ಷಗಳ ಹಿಂದೆ ಮಾರ್ಗರೇಟ್ ಆಳ್ವ ಅವರು ಟಿಕೆಟ್ ಮಾರಿದ್ದಾರೆ ಎಂದಿದ್ದರು. ನಿಮ್ಮ ನಡುವಳಿಕೆ ನೋಡಿಕೊಳ್ಳಿ. ಚೈತ್ರಾ ಕುಂದಾಪುರ ಅವರ ಬಗ್ಗೆ ತನಿಖೆ ಆಗಲಿ. ಅವರಿಗೆ ಶಿಕ್ಷೆಯಾಗಲಿ. ಕಾಂಗ್ರೆಸ್ನವರು ತಲೆತಲಾಂತರದಿಂದ ಟಿಕೆಟ್ ಮಾರಾಟ ಮಾಡ್ತಾ ಇದ್ದೀರಿ. 20 ಸಾವಿರಕ್ಕಿಂತ ಹೆಚ್ಚು ಹಣವನ್ನು ವಹಿವಾಟು ಮಾಡಬಾರದು ಎಂದು ಸರ್ಕಾರದ ಕಟ್ಟುನಿಟ್ಟಿನ ಕಾನೂನು ಇದೆ. ದುಡ್ಡು ಕೊಟ್ಟ ಉದ್ಯಮಿಗೆ ಬುದ್ಧಿ ಬೇಡವಾ? ಎಂದು ಪ್ರಶ್ನಿಸಿದರು.
ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿ: ಚೈತ್ರಾ ಅವರ ಬಗ್ಗೆ ಯಾರಿಗೂ ಅನುಕಂಪ ಬರುವಂತಹ ಪ್ರಶ್ನೆಯೇ ಇಲ್ಲ. ವಿಶೇಷ ತಂಡ ಈ ಬಗ್ಗೆ ತನಿಖೆ ಮಾಡಬೇಕು. ಇಷ್ಟು ದುಡ್ಡು ಎಲ್ಲಿಂದ ಬಂತು ಎಂಬುವುದು ಗಂಭೀರ ವಿಷಯ. ರಾಜಕಾರಣದಲ್ಲೂ ಇದು ನಡೆದಿದೆ ಅಂತಾ ದೊಡ್ಡ ಸುದ್ದಿಯಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಸಲಿ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿ ಎಂದು ಅವರು ಒತ್ತಾಯಿಸಿದರು.
ಕೇಂದ್ರದ ಮಧ್ಯಸ್ಥಿಕೆ ಪ್ರಶ್ನೆಯೇ ಇಲ್ಲ:ಕಾವೇರಿ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, " ಈ ವಿಚಾರದಲ್ಲಿ ರಾಜ್ಯ ಸರ್ಕಾರ ಆರಂಭದಿಂದಲೇ ತಪ್ಪು ಹೆಜ್ಜೆ ಇಟ್ಟಿದೆ. ಕಾವೇರಿ ವಿಚಾರದಲ್ಲಿ ಪ್ರಧಾನಿ ಮತ್ತು ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯ ಪ್ರಶ್ನೆ ಬರಲ್ಲ. ಇಷ್ಟರ ನಡುವೆಯೂ ನಾವು ಸಾಧ್ಯವಾದಷ್ಟು ಸಹಕಾರವನ್ನು ರಾಜ್ಯ ಸರ್ಕಾರಕ್ಕೆ ಕೊಡುತ್ತಿದ್ದೇವೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ 2,500 ಕ್ಯೂಸೆಕ್ ನೀರು ಬಿಡುವುದಾಗಿ ಹೇಳುವ ಅವಶ್ಯಕತೆ ಇರಲಿಲ್ಲ. ತಮಿಳುನಾಡು ಮತ್ತು ಕರ್ನಾಟಕದ ಸಿಎಂಗಳು ಒಂದೆಡೆ ಕುಳಿತು ಚರ್ಚೆ ಮಾಡಬೇಕು. ರಾಜ್ಯದ ಎಲ್ಲ ಸಂಸದರು ಮತ್ತು ರಾಜ್ಯಸಭಾ ಸದಸ್ಯರು ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಿದ್ದೇವೆ. ಮುಂದೆಯೂ ರಾಜ್ಯ ಸರ್ಕಾರದ ಜತೆಗೆ ಇರಲಿದ್ದೇವೆ" ಎಂದರು.