ಧಾರವಾಡ: ಸಿದ್ದರಾಮಯ್ಯ ಆಗಲಿ, ಬೇರೆ ಯಾರೇ ಆಗಲಿ ಮೊಟ್ಟೆ ಎಸೆಯೋದು, ಕಪ್ಪು ಧ್ವಜ ಪ್ರದರ್ಶನ ಮಾಡೋದರ ಪರವಾಗಿ ನಾನು ಇಲ್ಲ. ಮೊಟ್ಟೆ ಎಸೆದಿದ್ದು ಸರಿಯಲ್ಲ ಎಂದು ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಆದರೆ, ಸಿದ್ದರಾಮಯ್ಯ ಅವರು ಸಾವರ್ಕರ್ ಬಗ್ಗೆ ಹೇಳಿದ್ದನ್ನು ಇಲ್ಲಿ ಗಮನಿಸಬೇಕು. ಸಾವರ್ಕರ್ ಬಗ್ಗೆ ನಿಮ್ಮ ಅಭಿಪ್ರಾಯ ಬೇರೆ ಇರಬಹುದು. ಆದರೆ, ಅವರ ಬಗ್ಗೆ ವಿಶ್ವಾಸ, ಶ್ರದ್ಧೆ ಇದ್ದವರಿಗೆ ಅಪಮಾನವಾಗೋ ರೀತಿಯಲ್ಲಿ ಮಾತನಾಡಿದ್ದೀರಿ. ಇದು ಸರಿಯಲ್ಲ. ಸ್ವತಃ ಇಂದಿರಾ ಗಾಂಧಿಯವರು ಸಾವರ್ಕರ್ ಬಗ್ಗೆ ಪತ್ರ ಬರೆದಿದ್ದರು. ಅವರು ಭಾರತದ ಸುಪುತ್ರ ಅಂತಾ ಹೊಗಳಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಪಾತ್ರ ದೊಡ್ಡದಿದೆ ಎಂದಿರುವುದಾಗಿ ತಿಳಿಸಿದರು.
ನಕಲಿ ಕಾಂಗ್ರೆಸ್: ಮಹಾತ್ಮ ಗಾಂಧಿಯವರು ಸಾವರ್ಕರ್ ಹೋರಾಟ ನೆನಪಿಸಿದ್ದರು. ಬ್ರಿಟಿಷರಿಗೆ ಸಾವರ್ಕರ್ ಅವರನ್ನು ಜೈಲಿನಿಂದ ಬಿಡುವಂತೆ ಕೇಳಿದ್ದರು. ಅವರೆಲ್ಲ ಒರಿಜಿನಲ್ ಕಾಂಗ್ರೆಸ್ಸಿಗರು. ವಿಚಾರ ಭೇದವಿದ್ದರೂ ಸಾವರ್ಕರ್ ಬಗ್ಗೆ ಗೌರವ ಹೊಂದಿದ್ದರು. ಆದರೆ, ಈಗ ಇರೋದು ಡೂಪ್ಲಿಕೆಟ್, ನಕಲಿ ಕಾಂಗ್ರೆಸ್. ಈ ನಕಲಿ ಕಾಂಗ್ರೆಸ್ ಅನ್ನೇ ಸಿದ್ದರಾಮಯ್ಯ ವಿರೋಧಿಸುತ್ತಾ ಬಂದಿದ್ದರು. ಹಿಂದೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯನ್ನು ಇವರೇ ಬೈದಿದ್ದರು. ಸ್ವಲ್ಪ ಸಿದ್ದರಾಮಯ್ಯನವರು ಹಳೆಯದನ್ನು ನೆನಪು ಮಾಡಿಕೊಳ್ಳಬೇಕಿದೆ. ಈಗ ಸಿದ್ದರಾಮಯ್ಯ ನಕಲಿ ಕಾಂಗ್ರೆಸ್‌ನ ನಕಲಿ ಗಾಂಧಿಗಳನ್ನು ಮೆಚ್ಚಿಸಲು ಹೊರಟಿದ್ದಾರೆ ಎಂದು ಹರಿಹಾಯ್ದರು.