ಹುಬ್ಬಳ್ಳಿ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿ ತಮ್ಮ ರಾಜಕೀಯ ಚಟವನ್ನು ತೀರಿಸಿಕೊಳ್ಳುತ್ತಿದ್ದಾರೆ. ಅವರು ನಿನ್ನೆ ಮಂಡಿಸಿರುವ ಬಜೆಟ್ ಸಂಪೂರ್ಣ ತುಷ್ಟೀಕರಣದ ಬಜೆಟ್ ಆಗಿದ್ದು, ಅಭಿವೃದ್ಧಿಗೆ ಪೂರಕವಾಗಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಶುಕ್ರವಾರ ಸಿದ್ದರಾಮಯ್ಯನವರು ಬಜೆಟ್ ಮಂಡನೆ ಮಾಡಿದ್ದಾರಾ? ಅಥವಾ ಬಿಜೆಪಿಯನ್ನು ಟೀಕೆ ಮಾಡಿದ್ದಾರಾ? ಅರ್ಥವಾಗುತ್ತಿಲ್ಲ. ಬಜೆಟ್ ಮಂಡನೆಗಿಂತ ಬಿಜೆಪಿಯನ್ನು ಟೀಕೆ ಮಾಡಿದ್ದೇ ಹೆಚ್ಚು. ಕೋವಿಡ್ ನಿರ್ವಹಣೆ ಬಗ್ಗೆ ಮಾತನಾಡಿದ್ದಾರೆ. ಇದೇ ಮೊದಲ ಬಾರಿಗೆ ದೇಶದಲ್ಲಿ ವ್ಯಾಕ್ಸಿನ್ ತಯಾರಿಸಿ ಎಲ್ಲರಿಗೂ ನೀಡಿದ್ದೇವೆ. ಅಲ್ಲದೇ, ಬೇರೆ ದೇಶಗಳಿಗೂ ಸಹ ಕೊಟ್ಟಿದ್ದೇವೆ. ಆದರೆ, ಸಿಎಂ ಸಿದ್ದರಾಮಯ್ಯನವರು ಭಾರತ ದ್ವೇಷಿ ರಾಹುಲ್ ಗಾಂಧಿ ತರ ಮಾತನಾಡುತ್ತಿದ್ದಾರೆ" ಎಂದು ಹರಿಹಾಯ್ದರು.
ಬಜೆಟ್‌ನಲ್ಲಿ ಆಸ್ತಿ ಕರ ಏರಿಕೆ ಮಾಡಿದ್ದಾರೆ. ಅಬಕಾರಿ ಇಲಾಖೆಗೆ ಟಾರ್ಗೆಟ್ ಕೊಟ್ಟಿದ್ದಾರೆ. ಎಲ್ಲರಿಗೂ ಮದ್ಯಪಾನ ಮಾಡಿಸಿ, ಹಣ ತಂದುಕೊಡಿ ಎಂಬುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ. ಎನ್ಇಪಿಗೆ ಮೊದಲು ಕಾಂಗ್ರೆಸ್ ಒಪ್ಪಿಗೆ ನೀಡಿತ್ತು. ಆದರೆ ಇವತ್ತು ಅದನ್ನು ಕೈಬಿಡಲಾಗಿದೆ. ಇದು ಸಂಪೂರ್ಣ ತುಷ್ಟೀಕರಣದ ಬಜೆಟ್ ಆಗಿದ್ದು, ಅಭಿವೃದ್ಧಿಗೆ ಪೂರಕವಾಗಿಲ್ಲ. ಶಾಸಕರಿಗೆ ಅನುದಾನ ಕೇಳಬೇಡಿ ಎಂದು ನೇರವಾಗಿ ಮುಖ್ಯಮಂತ್ರಿಗಳು ಹೇಳುತ್ತಾರೆ ಎಂದರೆ ಕಾಂಗ್ರೆಸ್ಗೆ ಯಾವ ಸ್ಥಿತಿ ಬಂದಿದೆ ಎಂಬುವುದಕ್ಕೆ ಇದೇ ಸಾಕ್ಷಿ ಎಂದರು.
ಯುವ ಶಕ್ತಿಗೆ ಬಜೆಟ್‌ನಲ್ಲಿ ನಯಾಪೈಸೆ ಹಣ ಇಟ್ಟಿಲ್ಲ, ಗೃಹಲಕ್ಷ್ಮಿಗೆ ಹಣ ಇಟ್ಟಿದ್ದಾರೆ. ರೈಲ್ವೆ ಯೋಜನೆಗೆ ರಾಜ್ಯದ ಪಾಲಿನ ಅನುದಾನ ಮೀಸಲಿಟ್ಟಿಲ್ಲ. ಹತ್ತು ಕೆಜಿ ಅಕ್ಕಿ ಬಗ್ಗೆ ಬಜೆಟ್‌ನಲ್ಲಿ ಹೇಳಿದ್ದಾರೆ. ಈ ಪೈಕಿ ಐದು ಕೆಜಿ ಕೇಂದ್ರ ಸರ್ಕಾರದ್ದಿದೆ. ಅವರೇನು ಕೊಡುತ್ತಾರೆ ಎಂಬುದನ್ನು ಹೇಳುತ್ತಿಲ್ಲ. ಇದನ್ನು ನೋಡಿದ್ರೆ ಸಿದ್ದರಾಮಯ್ಯನವರು ಹಿಟ್ಲರ್ ರೀತಿ ಆಡಳಿತ ಮಾಡಲು ತಿರ್ಮಾನ ಮಾಡಿದ್ದಾರೆ ಎಂದು ಜೋಶಿ ಕಿಡಿಕಾರಿದರು.