ಧಾರವಾಡ: 1950ರಲ್ಲಿಯೇ ಆರ್ಎಸ್ಎಸ್ ಈ ಸಂವಿಧಾನ ನಮ್ಮದಲ್ಲ ಎಂದು ಹೇಳಿತ್ತು. ನಮಗೆ ಯಾವಾಗ ಅವಕಾಶ ಸಿಗುತ್ತೋ ಆ ದಿನ ಅದನ್ನು ನಾವು ಬದಲಾವಣೆ ಮಾಡುತ್ತೇವೆ ಎಂದಿದ್ದರು ಎಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮೊಮ್ಮಗ ಪ್ರಕಾಶ ಅಂಬೇಡ್ಕರ್ ಹೇಳಿದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೀಸಲಾತಿ ಇರದಿದ್ದರೆ ನಿಮ್ಮ ಮಕ್ಕಳು ಶಿಕ್ಷಣ ಪಡೆಯಲು ಆಗಲ್ಲ, ನೌಕರಿಯೂ ಸಿಗಲ್ಲ. ಯಾರು ತಮ್ಮ ಪರಿವಾರದ ವಿಚಾರ ಮಾಡುತ್ತಿದ್ದಾರೋ ಅವರಿಗೆ ಸಾಮಾಜಿಕ ಜವಾಬ್ದಾರಿಯೂ ಇರುತ್ತದೆ. ಸಾಮಾಜಿಕ ಜವಾಬ್ದಾರಿ ನೆರವೇರಿಸಲು ಸಂವಿಧಾನ ಉಳಿಸಬೇಕು. ಸಂವಿಧಾನ ಉಳಿಸಲು ಸಾಮಾಜಿಕ ಹೋರಾಟ ಅಗತ್ಯ. ನಮ್ಮ ಜವಾಬ್ದಾರಿ ಮರೆತರೆ ತಮ್ಮ ಮಕ್ಕಳನ್ನು ಬಂಧನದಲ್ಲಿಟ್ಟಂತೆ ಎಂದರು.
ಸಂವಿಧಾನ ಉಳಿಸಲು ಸಾಮಾಜಿಕ ಹೋರಾಟ ಅಗತ್ಯ- ಪ್ರಕಾಶ್ ಅಂಬೇಡ್ಕರ್ ಬಿಜೆಪಿ ಎಲ್ಲ ರಾಜ್ಯಗಳಲ್ಲಿ ರಾಜಕೀಯ ಸಂಘಟನೆ ಅಳಿಸಲು ಮುಂದಾಗಿದೆ. ಆರ್ಎಸ್ಎಸ್ ಬಿಜೆಪಿಯ ಟೇಬಲ್ ಮೇಲೆ ಸಂವಿಧಾನ ಬದಲಾವಣೆಯ ಅಜೆಂಡಾ ಇಟ್ಟಿದೆ. ಪರಿವಾರದ ಸಂರಕ್ಷಣೆ, ಸಾಮಾಜಿಕ ಸಂರಕ್ಷಣೆ ಅಲ್ಲ ಎಂದು ಅವರು ತಿಳಿಸಿದರು.
ಭಾರತ ಜೋಡೋ ಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, ಭಾರತ ಒಡೆದಿಲ್ಲ, ಒಡೆದಿದ್ದರೆ ಅದನ್ನು ಜೋಡಿಸಬಹುದು. ವಿಚಾರ ಮಾಡುವ ರಾಜಕಾರಣ ಕಾಂಗ್ರೆಸ್ನಲ್ಲಿ ಇಲ್ಲವೇ ಇಲ್ಲ. ಕಾಂಗ್ರೆಸ್ ದಾರಿ ತಪ್ಪಿಸುವ ರಾಜಕೀಯ ಮಾಡುತ್ತಿದೆ. ಬಿಜೆಪಿಗೆ ಸಹಾಯ ಮಾಡುವ ರಾಜಕಾರಣ ಅವರದ್ದು. ಅದಕ್ಕಾಗಿ ಬಿಜೆಪಿಯ ಧೈರ್ಯ ಬೆಳೆಯುತ್ತಿದೆ ಎಂದು ಟೀಕಿಸಿದರು.
ಇದನ್ನೂ ಓದಿ:ಎನ್ಆರ್ಸಿ, ಸಿಎಎ ಅವಶ್ಯಕತೆ ನಮ್ಮಗಿಲ್ಲ : ಪ್ರಕಾಶ್ ಅಂಬೇಡ್ಕರ್