ಹುಬ್ಬಳ್ಳಿ :ಮಹಿಳೆಯು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವುದು ನಿಜಕ್ಕೂ ದುರ್ದೈವಕರ ಸಂಗತಿಯಾಗಿದೆ. ಜನರು ಯಾವುದೇ ಕಾರಣಕ್ಕೂ ದುಡುಕಿ ನಿರ್ಧಾರ ತೆಗದುಕೊಳ್ಳಬಾರದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇದೇ ವೇಳೆ ಮನವಿ ಮಾಡಿದರು.
ಸಚಿವರ ಮನೆಯ ಮುಂದೆ ವಿಷ ಸೇವಿಸಿದ್ದ ಮಹಿಳೆ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಮಹಿಳೆಯ ಮನೆಯ ನಿರ್ಮಾಣದ ಬಗ್ಗೆ ನಾನು ಈ ಹಿಂದೆಯೇ ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಆಡಳಿತ ಮಂಡಳಿಗೆ ಪರಿಶೀಲನೆ ನಡೆಸಲು ಸೂಚಿಸಿದ್ದೆ. ಅಲ್ಲದೇ 50 ಸಾವಿರ ಅನುದಾನ ಕೂಡ ಅವರಿಗೆ ಬಿಡುಗಡೆ ಮಾಡಲಾಗಿತ್ತು. ಆದರೆ ಜನರು ದುಡುಕಿ ನಿರ್ಧಾರವನ್ನು ತೆಗೆದುಕೊಳ್ಳುವುದು ದುರದೃಷ್ಟಕರ ಸಂಗತಿಯಾಗಿದೆ ಎಂದರು.
ಇದನ್ನೂ ಓದಿ:ಕೇಂದ್ರ ಸಚಿವ ಜೋಶಿ ಮನೆಯೆದುರು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಸಾವು
ಜಿಲ್ಲಾಧಿಕಾರಿಯವರಿಗೆ ಲಿಖಿತವಾಗಿ ಮಾಹಿತಿ ಕೊಟ್ಟಿದ್ದೆ. ಅದರಂತೆ ಅವರಿಗೆ 50 ಸಾವಿರ ಪರಿಹಾರ ನೀಡಲಾಗಿತ್ತು. ಹೆಚ್ಚಿನ ಪರಿಹಾರ ಬೇಕಿದ್ದರೇ ಅದನ್ನು ಕೂಡ ಪರಿಶೀಲನೆ ನಡೆಸಲು ತಹಶಿಲ್ದಾರರಿಗೆ ಹಾಗೂ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೆ. ಅಲ್ಲದೇ ಮೂರು ಭಾರಿ ಪರಿಶೀಲನೆ ನಡೆಸಲಾಗಿದೆ. ಸರ್ಕಾರದ ಕಾರ್ಯಗಳು ಹಂತ ಹಂತವಾಗಿ ಮುನ್ನಡೆಯುತ್ತವೆ. ಆದರೆ ದುಡುಕಿ ನಿರ್ಧಾರವನ್ನು ಕೈಗೊಂಡಿರುವುದು ನನಗೂ ಬೇಸರವಾಗಿದೆ ಎಂದು ಅವರು ಹೇಳಿದರು.
ಮಹಿಳೆ ಆತ್ಮಹತ್ಯೆ ಪ್ರಕರಣದ ಬಗ್ಗೆ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದೇನು? ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಸಾವು:
ಬಿದ್ದ ಮನೆಯ ಪರಿಹಾರಕ್ಕಾಗಿ ಅಲೆದು ಅಲೆದು ಸುಸ್ತಾದ ಧಾರವಾಡ ತಾಲೂಕಿನ ಗರಗ ಗ್ರಾಮದ ಶ್ರೀದೇವಿ ವೀರಪ್ಪ ಕಮ್ಮಾರ ಎಂಬ ಮಹಿಳೆ ಏ. 6ರಂದು ಜೋಶಿ ಮನೆ ಎದುರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಹಿಂದೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮನೆಗೆ ಹಲವು ಬಾರಿ ಭೇಟಿ ನೀಡಿ ಪರಿಹಾರ ಕೇಳಿದ್ದರು ಎನ್ನಲಾಗಿದೆ. ಆದರೆ ಸಚಿವರು ಸರಿಯಾಗಿ ಸ್ಪಂದಿಸದ ಹಿನ್ನೆಲೆ ಮನನೊಂದ ಶ್ರೀದೇವಿ, ಅವರು ಆತ್ಮಹತ್ಯೆಗೆ ಯತ್ನಿಸಿದ್ದರು. ತೀವ್ರವಾಗಿ ಅಸ್ವಸ್ಥಗೊಂಡ ಮಳೆಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಅವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.