ಧಾರವಾಡ: ಹಿಂದುಳಿದ ವರ್ಗದವರು ನಮ್ಮವರೇ ಅಂತಾ ಕಾಂಗ್ರೆಸ್ ಭಾಷಣ ಮಾಡುತ್ತೆ. ಆದರೆ ಅವರು ಒಂದೇ ಒಂದು ಕಲ್ಯಾಣದ ಕೆಲಸ ಮಾಡಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹರಿಹಾಯ್ದರು. ಧಾರವಾಡದಲ್ಲಿಂದು ನಡೆದ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಅಸ್ತಿತ್ವ ಕೊಟ್ಟಿದ್ದು ಪ್ರಧಾನಿ ನರೇಂದ್ರ ಮೋದಿ, ಹಿಂದುಳಿದವರ ಪೈಕಿ ಯಾರಿಗೆ ಆದ್ಯತೆ ಕೊಡಬೇಕು ಅನ್ನೋ ಕೆಲಸವೂ ಆಗಿರಲಿಲ್ಲ. ಆ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಕೂಡ ಹಿಂದುಳಿದ ವರ್ಗದಿಂದ ಬಂದವರು, ಮೋದಿ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಒಬಿಸಿ ವರ್ಗದವರಿಗೆ ವೈದ್ಯಕೀಯ ಶಿಕ್ಷಣದಲ್ಲಿ 27 % ಮೀಸಲಾತಿ ಕಲ್ಪಿಸಿದ್ದು ಮೋದಿ, ಕೇಂದ್ರ ಸರ್ಕಾರ ಮುದ್ರಾ ಯೋಜನೆಯಲ್ಲಿ ಹೆಚ್ಚು ಸಾಲ ಸಿಕ್ಕಿದ್ದು ಒಬಿಸಿ ವರ್ಗದವರಿಗೆ. ಶೇ. 50 ರಷ್ಟು ಲಾಭ ಪಡೆದಿದ್ದು ಒಬಿಸಿಯವರು. ಕೇಂದ್ರ ಸರ್ಕಾರದಲ್ಲಿ ಶೇ. 60 ಹಿಂದುಳಿದ ವರ್ಗದ ಸಂಸದರಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳ ಪೈಕಿ ಶೇ. 63 ರಷ್ಟು ಹಿಂದುಳಿದ ವರ್ಗದವರಿದ್ದಾರೆ ಎಂದು ಜೋಶಿ ತಿಳಿಸಿದರು.
ಕೊರೊನಾ ಲಸಿಕೆಯನ್ನು ವಿದೇಶದಿಂದ ತರಬೇಕು ಅಂತಾ ಕಾಂಗ್ರೆಸ್‌ನ ಬೇಡಿಕೆಯಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ದೇಶದ ವಿಜ್ಞಾನಿಗಳಿಂದ ಲಸಿಕೆ ತಯಾರಿಸಲು ನಿರ್ಧರಿಸಿದರು. ಕೊನೆಗೂ ಅದರಲ್ಲಿ ಯಶಸ್ವಿಯಾದರು. 230 ಕೋಟಿ ಡೋಸ್ ಲಸಿಕೆಯನ್ನು ಉಚಿತವಾಗಿ ನೀಡಲಾಯಿತು. ಈ ಲಸಿಕೆಗೆ ಮೋದಿ ಲಸಿಕೆ ಅಂತಾ ಕಾಂಗ್ರೆಸ್ ನವರು ಟೀಕೆ ಮಾಡುತ್ತಿದ್ದರು. ಆದರೆ ಹಿಂದಿನ ಬಾಗಿಲಿನಿಂದ ಹೋಗಿ ಅವರೇ ಲಸಿಕೆ ಪಡೆದುಕೊಂಡರು. ಲಸಿಕೆ ಪಡೆದರೆ ಮಕ್ಕಳಾಗೋದಿಲ್ಲ ಅಂತಾ ಸುದ್ದಿಯನ್ನು ಸಹ ಹರಿಬಿಟ್ಟರು. ಅವರೇ ಹೋಗಿ ಕಳ್ಳತನದಿಂದ ಲಸಿಕೆ ಹಾಕಿಸಿಕೊಂಡರು. ನೀವು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮಾತನ್ನು ನಂಬಬೇಡಿ. ಕಾಂಗ್ರೆಸ್ ಇನ್ಯಾವತ್ತೂ ಸಿದ್ದರಾಮಯ್ಯರನ್ನ ಸಿಎಂ ಮಾಡೋದಿಲ್ಲ ಎಂದು ಪ್ರಹ್ಲಾದ್ ಜೋಶಿ ಹೇಳಿದರು.
ಇದನ್ನು ನೀವೆಲ್ಲ ಅರ್ಥ ಮಾಡಿಕೊಳ್ಳಿ ಎಲ್ಲರ ಕಾಳಜಿ ತೆಗೆದುಕೊಳ್ಳೋದು ಪ್ರಧಾನಿ ನರೇಂದ್ರ ಮೋದಿ, ಅವರು ಹಿಂದುಳಿದ ವರ್ಗದಿಂದ ಬಂದವರು ತೀರಾ ಬಡತನದಿಂದ ಬಂದಿದ್ದಾರೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಮನೆ ಕೊಟ್ಡಿದ್ದು ಅರವಿಂದ ಬೆಲ್ಲದ್, ಉತ್ತಮ ರಸ್ತೆ ನೀಡಿದ್ದು ಬೆಲ್ಲದ್, ಅದ್ಭುತ ಅನ್ನುವಂಥ ಮನೆ ಕಟ್ಟಿಸಿಕೊಟ್ಟಿದ್ದಾರೆ. ಜಿ ಪ್ಲಸ್ ಥ್ರೀ ಮಾದರಿ ಮನೆ ಕಟ್ಟಿಸಿಕೊಟ್ಟಿದ್ದಾರೆ. ಅಲ್ಲಿಗೆ ಹೋದರೆ ಬೆಂಗಳೂರಿಗೆ ಹೋದ ಅನುಭವವಾಗುತ್ತೆ. ಇಂಥ ವ್ಯಕ್ತಿಗೆ ನೀವು ಆಶೀರ್ವಾದ ಮಾಡಿ. ಸೂರ್ಯ-ಚಂದ್ರ ಇರೋದು ಎಷ್ಟು ಸತ್ಯವೋ ಅಷ್ಟೇ ಸತ್ಯ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರೋದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸದರು.
ಇದನ್ನೂ ಓದಿ:ಜೋಶಿ ಸಮ್ಮುಖದಲ್ಲಿ ದೇಸಾಯಿ - ಕೊರವರ ಸಂಧಾನ ಯಶಸ್ವಿ : ಮತ್ತೆ ಒಂದಾದ ಗೆಳೆಯರು