ಹುಬ್ಬಳ್ಳಿ :ಕೇಂದ್ರ ಸಚಿವರಾದ ನಂತರ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಪ್ರಹ್ಲಾದ್ ಜೋಶಿಯವರನ್ನು ಸಾವಿರಾರು ಬಿಜೆಪಿ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜೋಶಿ, ಹುಬ್ಬಳ್ಳಿ ಧಾರವಾಡ ಅವಳಿ ನಗರಕ್ಕೆ ಏನೇನು ಯೋಜನೆಗಳು ಬೇಕು ಎಂಬುವದನ್ನು ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದರೆ ನಾನು ಅದನ್ನು ಕೇಂದ್ರದಿಂದ ತರುವ ಕೆಲಸ ಮಾಡುತ್ತೇನೆ. ಎಲ್ಲಾ ವಿರೋಧ ಪಕ್ಷಗಳು ಬರುವ ಅಧಿವೇಶನ ಸುಸೂತ್ರವಾಗಿ ನಡೆಯಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಪ್ರಹ್ಲಾದ್ ಜೋಶಿಗೆ ಕಾರ್ಯಕರ್ತರ ಅದ್ದೂರಿ ಸ್ವಾಗತ ಮಹದಾಯಿ ಯೋಜನೆಯ ಕುರಿತು ಕಾನೂನು ತಜ್ಞರೊಂದಿಗೆ ಚರ್ಚಿಸಲಿ, ನೋಟಿಫಿಕೇಶನ್ ಪೆಂಡಿಗ್ ಇದೆ ಹಾಗಾಗಿ ಎಲ್ಲಾ ಕೂಡಿಕೊಂಡು ಮಹದಾಯಿ ಸಮಸ್ಯೆಯನ್ನು ಬಗೆಹರಿಸೋಣ ಇದರಲ್ಲಿ ರಾಜಕೀಯ ಮಾಡುವುದು ಬೇಡ ಎಂದರು.
ಕೋಯ್ನಾ ನದಿ ನೀರು ಬಿಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಸಮಸ್ಯೆಯನ್ನು ಮಹಾರಾಷ್ಟ್ರ ಸಿಎಂ ಜೊತೆಗೆ ಚರ್ಚೆ ಮಾಡಿ ಬಗೆಹರಿಸುತ್ತೇನೆ. ಈ ಕುರಿತು ರಾಜ್ಯ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಜೊತೆ ಮಾತುಕತೆ ನಡೆಸಿದ್ದೇನೆ. ಅವರು ಮುಂಬೈಗೆ ಬರುವುದಾದರೆ ನಾನು ಡಿಕೆಶಿ, ಮಹಾರಾಷ್ಟ್ರ ಸಿಎಂ ಭೇಟಿಯಾಗಿ ನೀರು ಬಿಡುವಂತೆ ಮನವಿ ಮಾಡುವದಾಗಿ ಹೇಳಿದರು.