ಧಾರವಾಡ: ಅನ್ನದಾತರ ಅನುಕೂಲಕ್ಕಾಗಿ ಜಾರಿಗೊಳಿಸಿದ ಪ್ರಧಾನಮಂತ್ರಿ ಫಸಲ ಭೀಮಾ ಯೋಜನೆಯನ್ನು ದುರುಪಯೋಗ ಪಡಿಸಿಕೊಂಡು ಸರ್ಕಾರದ ಜಮೀನಿನ ಮೇಲೆ ಹಕ್ಕು ತೋರಿಸಿ ವಂಚಕರು ಗೋಲ್ಮಾಲ್ ಮಾಡಿದ್ದಾರೆ.
ಸರ್ಕಾರಿ ಜಾಗದಲ್ಲಿ ಬೆಳೆವಿಮೆ ತುಂಬಿ ವಂಚನೆ ಆರೋಪ ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದ ಹೊರವಲಯದಲ್ಲಿರುವ ಸರ್ಕಾರಿ ಜಾಗದಲ್ಲಿ ಬೆಳೆಯಿದೆ ಎಂದು ತೋರಿಸಿ ವಿಮೆ ಕಂತು ತುಂಬಿ ಬೆಳೆಹಾನಿ ಪರಿಹಾರ ಪಡೆದುಕೊಂಡಿದ್ದಾರೆ. ಗ್ರಾಮದ ಸರ್ವೆ ನಂಬರ್ 48ರ ಸರ್ಕಾರದ ಗೋಮಾಳ ಜಾಗದಲ್ಲಿ ಬೆಳೆ ಬೆಳೆದಿದ್ದೇವೆ ಎಂದು 13 ಜನ ಬೆಳೆ ವಿಮೆ ತುಂಬಿ ಎರಡು ವರ್ಷದಿಂದ ಪರಿಹಾರ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಆದ್ರೆ, ಬೆಳೆಹಾನಿ ಪರಿಹಾರ ಪಡೆದುಕೊಂಡವರು ಯಾರೂ ರೈತರಲ್ಲ, ಸಿಎಸ್‌ಸಿ ಕೇಂದ್ರದಲ್ಲಿ ಕುಳಿತುಕೊಂಡು ನಕಲಿ ದಾಖಲೆ ಮೂಲಕ ಈ ರೀತಿ ಮಾಡಿಕೊಂಡಿದ್ದಾರೆ. ಈ ಕುರಿತು ಗ್ರಾಮದ ಸಾಮಾಜಿಕ ಹೋರಾಟಗಾರರೊಬ್ಬರು ದಾಖಲೆ ತೆಗೆಸಿದಾಗ, ಈ ವಂಚನೆ ಬಹಿರಂಗಗೊಂಡಿದೆ. ಸಿಎಸ್‌ಸಿ (ಸಾಮಾನ್ಯ ಸೇವಾ ಕೇಂದ್ರ)ಕೇಂದ್ರದಲ್ಲಿ ಕೆಲಸ ಮಾಡುವವರೇ ಇದರ ಮಾಸ್ಟರ್ ಮೈಂಡಗಳಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಕುರಿತು ಧಾರವಾಡ ಉಪವಿಭಾಗಾಧಿಕಾರಿ ಕಚೇರಿಗೆ ದೂರು ಬಂದ ಹಿನ್ನೆಲೆ ತನಿಖೆಗೆ ಅಧಿಕಾರಿಗಳನ್ನು ನೇಮಿಸಿ, ಸಿಪಿಯು ವಶಪಡಿಸಿಕೊಂಡಿದ್ದಾರೆ. ಸರ್ಕಾರಿ ಜಮೀನಿನ ಮೇಲೆ ವಿಮೆ ತುಂಬಿರುವ 13 ಜನರ ಮೇಲೆ ಎಫ್ಐಆರ್ ದಾಖಲಿಸುವಂತೆ ಕೃಷಿ ಇಲಾಖೆಗೆ ಸೂಚಿಸಿದ್ದಾರೆ.
ರೈತರ ಅನುಕೂಲಕ್ಕೆ ಮಾಡಿದ ಯೋಜನೆ ಮೇಲೆಯೂ ವಂಚಕರ ಕಣ್ಣು ಬಿದ್ದಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.