ಹುಬ್ಬಳ್ಳಿ:''ಅಧಿಕಾರ ಶಾಶ್ವತವಲ್ಲ ನಿಮ್ಮ ಹೃದಯದಲ್ಲಿರುವ ಜಾಗ ಶಾಶ್ವತವಾಗಿದೆ. ಕೋಟಿಗಟ್ಟಲೆ ನಮ್ಮ ಬಂಧುಗಳಿದ್ದಾರೆ. ನಿಮಗೆ ಒಂದು ಅಳಿಲು ಸೇವೆಯನ್ನು ಸಲ್ಲಿಸಿದ್ದೇನೆ'' ಎಂದು ಸಿಎಂ ಬಸವರಾಜ ಬೊಮ್ಮಾಯಿ ಭಾವುಕವಾಗಿ ಹೇಳಿದರು. ರಾಜ್ಯ ಪರಿಶಿಷ್ಟ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸಿ ಮತ್ತು ಒಳ ಮೀಸಲಾತಿ ನೀಡಿರುವ ಹಿನ್ನೆಲೆಯಲ್ಲಿ ಇಲ್ಲಿನ ನೆಹರು ಮೈದಾನದಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ದೀಪ ಬೆಳಗಿಸಿದ ಬಳಿಕ ಹಲಗೆ ಬಾರಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು.
ವಂಚನೆ ಮಾಡುವ ಆಟವನ್ನು ಕಾಂಗ್ರೆಸ್ ಆಡಿದೆ - ಸಿಎಂ:''ಐದು ವರ್ಷ ಬಾವಿಯಲ್ಲಿ ಇಳಿದು ಚುನಾವಣೆ ಬಂದಾಗ ಮಾತ್ರ ಮೇಲೆ ಬರುವುದು. ಚುನಾವಣೆ ಮುಗಿಸಿ ಬಾವಿ ಸೇರುವುದನ್ನು ಕಾಂಗ್ರೆಸ್ ಮಾಡಿದೆ. ವಂಚನೆ ಮಾಡುವ ಆಟವನ್ನು ಕಾಂಗ್ರೆಸ್ ಮಾಡುತ್ತಿದೆ ಈ ಬಗ್ಗೆ ಎಚ್ಚರಿಕೆ ಇರಲಿ. ಸಮಾಜವನ್ನು ಒಡೆದು ಆಳುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ'' ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
''ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಜಾತಿ ಒಡೆಯುವ ಕಾರ್ಯವನ್ನು ಮಾಡಿದ್ದಾರೆ. ಯಾರಿಗೂ ಯಾವುದೇ ಒಂದು ಅವಕಾಶಗಳನ್ನು ನೀಡದೇ ಒಡೆದು ಆಳುವ ನೀತಿಯನ್ನು ಅನುಸರಿಸಿದರು. 2016ರಲ್ಲಿ ನಿರೀಕ್ಷೆಯಿಂದ ನೆಹರು ಮೈದಾನದಲ್ಲಿ ಜನರು ಸೇರಿದ್ದರು. ಆದರೆ, ಸಿದ್ಧರಾಮಯ್ಯ ಅವರು ವೇಗವಾಗಿ ಬಂದು ದೀಪ ಹಚ್ಚಿ ಅದೇ ದಾರಿಯಲ್ಲಿ ಹೋದರು'' ಎಂದು ಗರಂ ಆದರು.
ಯಾರಿಗೂ ಅನ್ಯಾಯವಾಗದಂತೆ ಮೀಸಲಾತಿ- ಯಡಿಯೂರಪ್ಪ:''ಯಾರಿಗೂ ಅನ್ಯಾಯವಾಗದಂತೆ ಮೀಸಲಾತಿ ಮುಂದುವರೆಸುತ್ತೇವೆ. ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಅವರ ವೋಟ್ ಬ್ಯಾಂಕ್ ರಾಜಕಾರಣ ಜನರಿಗೆ ಅರ್ಥವಾಗಿದೆ'' ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.
''ಈ ಬಾರಿ ಚುನಾವಣೆಯಲ್ಲಿ ಸುಮಾರು 140 ಸೀಟಿಗಿಂತಲೂ ಹೆಚ್ಚು ಸ್ಥಾನವನ್ನು ಗೆಲ್ಲುತ್ತೇವೆ ಎನ್ನುವ ಭರವಸೆ ವ್ಯಕ್ತಪಡಿಸಿದರು. ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಸಾಕಷ್ಟು ಅವಮಾನ ಮಾಡಿದೆ. ಜಗಜೀವನರಾಮ್ ಅವರಿಗೂ ಕೂಡ ಸಾಕಷ್ಟು ಅವಮಾನ ಮಾಡಿದವರು ಈ ಕಾಂಗ್ರೆಸ್ಸಿಗರು. ಬಂಜಾರ ಸಮುದಾಯದ ಜನರ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಸಾಕಷ್ಟು ಕೊಡುಗೆ ನೀಡಿದೆ'' ಎಂದರು. ''ಎಸ್.ಸಿ, ಎಸ್.ಟಿ ಯಾವುದೇ ವರ್ಗದವರೂ ವಸತಿ ರಹಿತರಾಗಿ ಇರಬಾರದು. ಅವರೆಲ್ಲರಿಗೂ ಸೂರನ್ನು ಕಲ್ಪಿಸುವ ಕಾರ್ಯವನ್ನು ಪ್ರಧಾನಮಂತ್ರಿ ಮಾಡುವ ಕನಸನ್ನು ಕಂಡಿದ್ದಾರೆ'' ಎಂದು ಅವರು ಹೇಳಿದರು.