ಹುಬ್ಬಳ್ಳಿ :ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ದಿನಾಂಕ ನಿಗದಿಯಾದ ಬೆನ್ನಲ್ಲೆ ಆಗಸ್ಟ್ 16ರಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ. ಈ ನಿಟ್ಟಿನಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಚುನಾವಣಾ ಅಧಿಕಾರಿ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಿನ್ನೆ ಹೈಕೋರ್ಟ್‌ಗೆ ಚುನಾವಣಾ ಆಯೋಗದ ಪರ ವಕೀಲರು ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ಮಹಾನಗರಪಾಲಿಕೆ, ದೊಡ್ಡಬಳ್ಳಾಪುರ ನಗರಸಭೆ, ತರಿಕೆರೆ ಪುರಸಭೆ ಚುನಾವಣೆಗೆ ಈಗಾಗಲೇ ವೇಳಾಪಟ್ಟಿ ಪ್ರಕಟಿಸಲಾಗಿದೆ.
ಎಲ್ಲ ಸಿದ್ಧತೆಗಳು ನಡೆದಿವೆ ಎಂದು ತಿಳಿಸಿದ್ದಾರೆ. ಇದನ್ನು ದಾಖಲಿಸಿಕೊಂಡಿರುವ ಕೋರ್ಟ್ ಪ್ರಗತಿಯ ವರದಿಯನ್ನು ಸೆ.14ರೊಳಗೆ ಸಲ್ಲಿಸುವಂತೆ ಸೂಚಿಸಿ ಸೆ.16ಕ್ಕೆ ಮುಂದೂಡಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ನಡೆಯುವುದಕ್ಕೆ ಯಾವುದೇ ಅಡ್ಡಿ ಇಲ್ಲದಂತಾಗಿದೆ.
ಈಗಾಗಲೇ ನಾಮಪತ್ರ ಸಲ್ಲಿಕೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಚೇರಿಯಲ್ಲಿ 5 ಕಡೆ, ಧಾರವಾಡದಲ್ಲಿ 3 ಕಡೆ ಕೇಂದ್ರಗಳನ್ನು ತೆರೆಯಲು ಪ್ರಸ್ತಾವನೆಯನ್ನು ಮಹಾನಗರ ಆಯುಕ್ತ ಡಾ.ಸುರೇಶ್ ಇಟ್ನಾಳ್ ಸಲ್ಲಿಸಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳು ಚುನಾವಣೆಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ.
ಕಾಂಗ್ರೆಸ್ ಪಕ್ಷ ಉಸ್ತುವಾರಿ ನೋಡಿಕೊಳ್ಳಲು ಮಾಜಿ ಸಚಿವ ಆರ್ ವಿ ದೇಶಪಾಂಡೆ ನೇತೃತ್ವದ ಸಮಿತಿ ರಚಿಸಲಾಗಿದೆ. ಅತ್ತ ಬಿಜೆಪಿ ಕೂಡ ಉಸ್ತುವಾರಿಗಳನ್ನು ಪ್ರಕಟಿಸಿದೆ. ಅಲ್ಲದೆ, ಜಾತ್ಯಾತೀತ ಜನತಾದಳದ ಸಭೆಯೂ ಇಂದು ನಡೆದಿದೆ. ಆಪ್ ಹಾಗೂ ಎಐಎಂಐಎಗಳು ತಮ್ಮ ಕೆಲಸ ಆರಂಭಿಸಿವೆ. ರಾಜಕೀಯ ಪಕ್ಷಗಳಲ್ಲಿ ಟಿಕೆಟ್ಗಾಗಿ ಪೈಪೋಟಿ ಶುರುವಾಗಿದೆ.