ಹುಬ್ಬಳ್ಳಿ:ಬೆಳೆ ಬಂದರೆ ಬೆಲೆ ಇಲ್ಲ, ದರ ಇದ್ದರೆ ಇಳುವರಿ ಇಲ್ಲ. ಇದು ರೈತರಿಗೆ ಸರ್ವಕಾಲಕ್ಕೂ ಅನ್ವಯಿಸುವ ಮಾತು ಎಂದರೆ ತಪ್ಪಾಗಲ್ಲ. ಯಾಕಂದ್ರೆ ರೈತನ ಸ್ಥಿತಿ ಇದಕ್ಕೆ ಹೊರತಾಗಿಲ್ಲ. ಪ್ರತಿ ವರ್ಷವೂ ರೈತರು ನಾನಾ ಸಮಸ್ಯೆಗಳನ್ನು ಎದುರಿಸುತ್ತಲೇ ಬಂದಿದ್ದು, ಇದರ ನಡುವೆಯೂ ಉತ್ತಮ ಫಸಲಿನ ನಿರೀಕ್ಷೆಯಲ್ಲಿರುವ ರೈತನ ಬಾಯಿಗೆ ಕೆಲವರು ಮಣ್ಣು ಹಾಕುತ್ತಿದ್ದಾರೆ.
ಬೆಳೆದ ಮೆಣಸಿನಕಾಯಿ ಬೆಳೆಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಬಂದಿರುವ ರೈತ, ಮಾರುಕಟ್ಟೆಯ ದರವನ್ನು ನೋಡಿ ಕಂಗಾಲಾಗಿದ್ದಾನೆ. ಪ್ರತಿಷ್ಠಿತ ತಳಿಗಳಾದ ಬ್ಯಾಡಗಿ, ಡಬ್ಬಿ, ಕಡ್ಡಿ ತಳಿಯ ಮೆಣಸಿನಕಾಯಿ ಬೆಳೆದರೂ ಸರಿಯಾದ ಬೆಲೆ ಸಿಗುತ್ತಿಲ್ಲ ಎಂದು ಮರುಗುತ್ತಿದ್ದಾನೆ. ವರ್ಷವಿಡೀ ಕಷ್ಟಪಟ್ಟು ಬೆಳೆದ ಬೆಳೆಗೆ ಸರಿಯಾದ ಇಳುವರಿ ಇಲ್ಲ. ಇನ್ನೂ ದರವಂತೂ ಕೈ ಸುಡುವಂತಾಗಿದೆ. ಇದಕ್ಕೆ ಕಾರಣ ರೈತರಿಗೆ ಕಳಪೆ ಬೀಜ ಕೊಟ್ಟು, ಮೋಸ ಮಾಡುತ್ತಿರುವುದು.
ಕಳಪೆ ಬೀಜದ ಹಾವಳಿಗೆ ಹೈರಾಣಾದ ಅನ್ನದಾತ ಊರಿಗೆ ಬೀಜ ಮಾರಾಟ ಮಾಡಲು ಬಂದ ವ್ಯಾಪಾರಸ್ಥರು, ಸುಳ್ಳು ಹೇಳಿ ನಕಲಿ ಬೀಜ ಕೊಟ್ಟಿದ್ದಾರೆ. ಎಕರೆಗೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ಚೀಲ ಮೆಣಸಿನಕಾಯಿ ಬೆಳೆಯಬಹುದಿತ್ತು. ಆದ್ರೆ ಮೋಸದಾಟಕ್ಕೆ ಬಲಿಯಾಗಿ, ಕೇವಲ ನಾಲ್ಕು ಚೀಲ ಮೆಣಸಿನಕಾಯಿ ತೆಗೆದುಕೊಂಡು ಮಾರುಕಟ್ಟೆಗೆ ಬರುವಂತಾಗಿದೆ. ರೈತರು ಸರಿಯಾದ ಬೀಜಗಳನ್ನು ಪರಿಶೀಲನೆ ಮಾಡಿಕೊಂಡೇ ತೆಗೆದುಕೊಳ್ಳಬೇಕು. ಸರ್ಕಾರದ ಅನುಮತಿ ಪಡೆದ ಪ್ಯಾಕಿಂಗ್ನಲ್ಲಿದ್ದರೆ ಮಾತ್ರ ತೆಗೆದುಕೊಳ್ಳಬೇಕು ಅಂತಾರೆ ವ್ಯಾಪಾರಿ ಸಂಘದ ಮುಖ್ಯಸ್ಥರು.
ಬ್ಯಾಡಗಿ ತಳಿ ಬೆಳೆದವರಿಗೆ 28 ಸಾವಿರದಿಂದ 35 ಸಾವಿರ ದರ ಸಿಕ್ಕಿದ್ದು, ಎಕರೆಗೆ 20 ಕ್ವಿಂಟಲ್ ಬೆಳೆದಿದ್ದಾರೆ. ಆದರೆ ಮೋಸಕ್ಕೊಳಗಾದ ರೈತ ಮಾರುಕಟ್ಟೆಗೆ ಮೆಣಸಿನಕಾಯಿ ತೆಗೆದುಕೊಂಡು ಬಂದು ಕಣ್ಣು ಕಣ್ಣು ಬಿಡುವಂತಾಗಿದೆ. ಕಳಪೆ ಬೀಜದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಬೇಕು. ಅಲ್ಲದೇ ರೈತ ಇಂತಹ ಮೋಸಗಾರರದಿಂದ ದೂರ ಉಳಿದು ಕೃಷಿಯಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕಿದೆ.