ಹುಬ್ಬಳ್ಳಿ:ಜೆಎನ್ಯು ವಿದ್ಯಾರ್ಥಿಗಳ ಮೇಲೆ ಹಲ್ಲೆ ಪ್ರಕರಣವನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಆ ಜಗಳಕ್ಕೆ ರಾಜಕಾರಣ ಬೆರೆಸುತ್ತಿರುವುದು ಕಾಂಗ್ರೆಸ್ನ ಅತ್ಯಂತ ಕ್ಷುಲ್ಲಕ ಮನೋಭಾವ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಜೆಎನ್ಯುನಲ್ಲಿ ನಡೆದ ಘಟನೆಯ ಕುರಿತು ಹುಬ್ಬಳ್ಳಿಯಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಪ್ರಕರಣವನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಬಿಜೆಪಿಯು ಈ ಘಟನೆಯ ಬಗ್ಗೆ ತನಿಖೆ ಕೈಗೊಳ್ಳಲು ಸೂಚಿಸುತ್ತದೆ ಎಂದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಜೆಎನ್ಯುನಲ್ಲಿ ನಡೆಯುತ್ತಿರುವ ಬೇರೆ ಘಟನೆಗಳ ಬಗ್ಗೆ ಸಮಾಜ ಹಾಗೂ ಮಾಧ್ಯಮ ಜಾಗೃತಿ ಮೂಡಿಸಬೇಕಿದೆ. ಜೆಎನ್ಯುನಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ನನಗೆ ಬಂದಿರುವ ಮಾಹಿತಿ ಪ್ರಕಾರ, ಎರಡು ಗುಂಪುಗಳ ನಡುವೆ ನಡೆದ ಜಗಳ ಇದಾಗಿದ್ದು, ಇದರಲ್ಲಿ ಯಾವುದೇ ರಾಜಕಾರಣವಿಲ್ಲ ಎಂದರು.
ಬಿಜೆಪಿ ಸರ್ಕಾರದ ಕೈವಾಡವಿದೆ ಎಂಬ ಆರೋಪದ ಕುರಿತು ಮಾತನಾಡಿದ ಅವರು, ಬಿಜೆಪಿ ಕೈವಾಡ ಇದೆ ಎಂದು ಸುಳ್ಳು ಹೇಳಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಈ ಘಟನೆ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.