ಧಾರವಾಡ:ಇಂದು ಪೊಲೀಸ್ ಹುತಾತ್ಮರ ದಿನಾಚರಣೆ ನಿಮಿತ್ತ ಧಾರವಾಡ ಜಿಲ್ಲಾ ಡಿಎಆರ್ ಮೈದಾನದಲ್ಲಿ ಪೊಲೀಸ್ ವತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ವೇಳೆ, ಹುತಾತ್ಮ ಪೊಲೀಸ್ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸುವಾಗ ಮೃತ ಹುತಾತ್ಮ ಪೊಲೀಸ್ ಕಾನ್ಸ್ಟೇಬಲ್ ಹುಚ್ಚಪ್ಪ ಮಲ್ಲಣ್ಣನವರ್ ಕುಟುಂಬಸ್ಥರು ಕಣ್ಣೀರು ಹಾಕಿದರು.
ಗೌರವ ನಮನ ಸಲ್ಲಿಸುವ ವೇಳೆ ಮೃತ ಪೊಲೀಸ್ ತಾಯಿ ನೀಲವ್ವ, ತಂದೆ ಹನುಮಪ್ಪ, ತಂಗಿ, ಅಕ್ಕ, ಮಾವ ಮತ್ತು ತಮ್ಮ ಮಲ್ಲಿಕಾರ್ಜುನ ಮೃತ ಹುಚ್ಚಪ್ಪನನ್ನು ನೆನೆದು ಭಾವುಕರಾದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ ಹಾಗೂ ಗಣ್ಯರು ಮಲ್ಲಣ್ಣನವರ್ ಕುಟುಂಬ ಸದಸ್ಯರನ್ನು ಸಂತೈಸಿದರು. ಗಣೇಶೋತ್ಸವ ಆಚರಣೆ ವೇಳೆ ಧಾರವಾಡದ ಯರಿಕೊಪ್ಪ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಹುಚ್ಚಪ್ಪ ಮಲ್ಲಣ್ಣನವರು ಮೃತಪಟ್ಟಿದ್ದರು. ಧಾರವಾಡದ ಗರಗ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಹುಚ್ಚಪ್ಪ ಕೆಲಸ ಮಾಡುತ್ತಿದ್ದರು.
ಮಾನವೀಯತೆ ಮೆರೆದ ಗರಗ ಠಾಣೆ ಪೊಲೀಸ್ ಸಿಬ್ಬಂದಿ:ಗರಗ ಪೊಲೀಸ್ ಠಾಣೆ ಹಾಗೂ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿರುವ ಹುಚ್ಚಪ್ಪನ ಸಹೋದ್ಯೋಗಿಗಳು ಪಿಎಸ್ಐ ಎಫ್.ಎಮ್.ಮಂಟೂರ ನೇತೃತ್ವದಲ್ಲಿ ಸುಮಾರು 1 ಲಕ್ಷ ಐದು ಸಾವಿರ ರೂ.ಗಳನ್ನು ಆರ್ಥಿಕ ಸಹಾಯಧನವಾಗಿ ಇಂದಿನ ಕಾರ್ಯಕ್ರಮದಲ್ಲಿ ಎಸ್.ಪಿ.ಡಾ.ಗೋಪಾಲ ಬ್ಯಾಕೋಡ ಅವರ ಮೂಲಕ ಹುಚ್ಚಪ್ಪನ ಕುಡುಂಬಕ್ಕೆ ನೀಡಿದರು. ಪೊಲೀಸ್ ಇಲಾಖೆ ಮತ್ತು ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯ ಹಾಗೂ ಆರ್ಥಿಕ ನೆರವನ್ನು ಮೃತ ಹುಚ್ಚಪ್ಪನ ಕುಟುಂಬಕ್ಕೆ ತಲುಪಿಸಲು ಎಲ್ಲ ಸಹಾಯ, ನೆರವು ನೀಡಲಾಗುವುದು ಎಂದು ಎಸ್.ಪಿ ತಿಳಿಸಿದರು.
ಗಣ್ಯರಿಂದ ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಅರ್ಪಣೆ:ನಗರದ ಕಾರವಾರ ರಸ್ತೆಯ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಕವಾಯತು ಮೈದಾನದಲ್ಲಿ ಪೊಲೀಸ್ ಆಯುಕ್ತಾಲಯ ಹುಬ್ಬಳ್ಳಿ ಧಾರವಾಡ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ನಿಮಿತ್ತ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಅರ್ಪಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿದರು. ಈ ವೇಳೆ, ಪ್ರತಿ ವರ್ಷ ಅಕ್ಟೋಬರ್ 21 ರಂದು ಪೊಲೀಸ್ ಹುತಾತ್ಮರ ದಿನವನ್ನು ಆಚರಿಸಲಾಗುತ್ತದೆ. ಆ ಮೂಲಕ ಅವರ ತ್ಯಾಗ ನೆನೆಯಲಾಗುವುದು. ನಿತ್ಯದಲ್ಲಿ ಪೊಲೀಸರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಬಹಳ ಮಹತ್ವದ್ದಾಗಿದೆ ಎಂದರು.
ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾದ ರೇಣುಕಾ ಕೆ. ಸುಕುಮಾರ ಮಾತನಾಡಿ, 1959ರಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ ಎಸ್‌ಐ ಕರಂ ಸಿಂಗ್ ನೇತೃತ್ವದ ತಂಡ ಕೇವಲ ರೈಫಲ್‌ನೊಂದಿಗೆ ಲಡಾಖ್‌ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿತ್ತು. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಚೀನಾ ಪಡೆ ಭಾರತೀಯ ಪೊಲೀಸರ ಮೇಲೆ ಏಕಾಏಕಿ ದಾಳಿ ನಡೆಸಿದಾಗ ವೀರಾವೇಷದಿಂದ ಹೋರಾಡಿ ಪ್ರಾಣಾರ್ಪಣೆ ಮಾಡಿದರು.