ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 12 ಕೇಸ್ ದಾಖಲು ಮಾಡಲಾಗಿದ್ದು, 134 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪೊಲೀಸ್ ಇಲಾಖೆ ತನಿಖೆ ಕೈಗೊಂಡಿದ್ದು, ಸೂಕ್ತ ಬಂದೋಬಸ್ತ್ ಜೊತೆಗೆ ನಾಳೆಯವರೆಗೂ 144 ಸೆಕ್ಷನ್ ಜಾರಿಯಲ್ಲಿರಲಿದೆ ಎಂದು ಪೊಲೀಸ್ ಆಯುಕ್ತ ಲಾಬೂರಾಮ್ ಹೇಳಿದರು.
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಶನಿವಾರ ರಾತ್ರಿ ನಡೆದ ಘಟನೆಯ ಮೂರು ನಾಲ್ಕು ಗಂಟೆಗಳ ಬಳಿಕ ಪರಿಸ್ಥಿತಿ ಶಾಂತಗೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಕಸಬಾ ಪೊಲೀಸ್ ಠಾಣೆ, ಕೇಶ್ವಾಪೂರ, ಬೆಂಡಿಗೇರಿ ಹಾಗೂ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಮತ್ತಷ್ಟು ಪೊಲೀಸ್ ಬಿಗಿ ಬಂದೋಬಸ್ತ್ ಕೂಡ ಮಾಡಲಾಗಿದೆ. ಪ್ರಕರಣದ ಆರೋಪಿಗಳ ಬಂಧನ ಹಾಗೂ ವಿಚಾರಣೆ ತೀವ್ರವಾಗಿ ನಡೆದಿದ್ದು, ತನಿಖೆ ಮತ್ತಷ್ಟು ಚುರುಕುಗೊಳ್ಳಲಿದೆ ಎಂದು ಅವರು ಹೇಳಿದರು.